ಮೈಸೂರು: ತಾಲೂಕಿನ ಸಾಹುಕಾರಹುಂಡಿ ಕೆರೆಯಲ್ಲಿ ಭಾನುವಾರ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ನಗರದ ಹೂಟಗಳ್ಳಿ ಕೆಎಚ್‌ಬಿ ಕಾಲನಿ ನಿವಾಸಿ ಪ್ರಸನ್ನ ಅವರ ಪುತ್ರ, ಪ್ರಥಮ ಪಿಯು ವಿದ್ಯಾರ್ಥಿ ವರುಣ್(16), ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ನಿವಾಸಿ ಧನಂಜಯ ಅವರ ಪುತ್ರ, 9ನೇ ತರಗತಿ ವಿದ್ಯಾರ್ಥಿ ಜಸ್ವಂತ್(14) ಮೃತರು.
ಭಾನುವಾರದ ರಜೆ ಹಿನ್ನೆಲೆಯಲ್ಲಿ ಮತ್ತೊಬ್ಬ ಬಾಲಕ ಅವಿನಾಶ್(14)ಜತೆ ಇಬ್ಬರೂ ಈಜಲು ತೆರಳಿದ್ದರು. ಆದರೆ, ಅವಿನಾಶ್ ನೀರಿಗೆ ಇಳಿದಿಲ್ಲ. ನೀರಿಗೆ ಇಳಿದಿದ್ದ ಇಬ್ಬರು ಸರಿಯಾಗಿ ಈಜಲು ಬಾರದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇಬ್ಬರ ಮೃತದೇಹಗಳನ್ನು ಇರಿಸಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.