Lorry driver dies at near hosuru 
ಜಿಲ್ಲೆ

ಆನೆ ಸಾಗಿಸುತ್ತಿದ್ದ ಲಾರಿ ಚಾಲಕ ಅದೇ ಲಾರಿ ಚಕ್ರಕ್ಕೆ ಬಲಿ

ವಿಜಯವಾಣಿ ಸುದ್ದಿಜಾಲ ಹೊಸೂರು
ಆನೆ ಸಾಗಿಸುತ್ತಿದ್ದ ಲಾರಿ ಚಾಲಕ ಅದೇ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ದುರ್ಘಟನೆ ಹೊಸೂರು ಸಮೀಪದ ಶಾನುಭಾವು ಕಾಡು ಪ್ರದೇಶದಲ್ಲಿ ಬುಧವಾರ ನಡೆದಿದೆ.ತಮಿಳುನಾಡು ಮೂಲದ ಚಾಲಕ ಅಂತೋಣಿಸ್ವಾಮಿ (47) ಮೃತ. ಅದೃಷ್ಟವಶಾತ್ ದಸರಾ ಆನೆಗೆ ಯಾವುದೇ ಅಪಾಯವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಹುಟ್ಕೋ ಠಾಣೆ ಪೊಲೀಸರು ಲಾರಿಯಲ್ಲಿದ್ದ ಆನೆಯನ್ನು ಮತ್ತೊಂದು ಲಾರಿ ಮೂಲಕ ತಮಿಳುನಾಡಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೇಕಲ್ ದಸರಾಗೆ ಬಂದಿದ್ದ ಆನೆಯನ್ನು ಲಾರಿಯಲ್ಲಿ ವಾಪಸ್ ಕರೆದುಕೊಂಡು ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಏನಿದು ಘಟನೆ: ಆನೇಕಲ್ ದಸರಾಗೆ ತಮಿಳುನಾಡಿನ ತಿರುಚಿಯಿಂದ ಆನೆಯನ್ನು ಕರೆತರಲಾಗಿತ್ತು. ದಸರಾ ಮುಗಿದ ಬಳಿಕ ಲಾರಿಯಲ್ಲಿ ಆನೆಯನ್ನು ವಾಪಸ್ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆ ರಸ್ತೆ ಬದಿ ಲಾರಿ ನಿಲ್ಲಿಸಿದ ಚಾಲಕ ಮೂತ್ರ ವಿಸರ್ಜನೆಗೆ ತೆರಳಿದ್ದ, ಈ ವೇಳೆ ಆನೆ ಅಲುಗಾಡಿದ್ದರಿಂದ ಲಾರಿ ಮುಂದಿದ್ದ ಹಳ್ಳದ ಕಡೆಗೆ ಸಾಗಿದೆ. ಇದನ್ನು ಕಂಡ ಚಾಲಕ ಲಾರಿಯನ್ನು ನಿಲ್ಲಿಸಲು ಮುಂದಾದ ವೇಳೆ ಅದೇ ಲಾರಿ ಚಕ್ರಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾನೆ.
ಬಾಡಿಗೆ ತಂದಿದ್ದ ಆನೆ: ತಿರುಚಿಯ ಶ್ರೀರಂಗಂ ಎಂಬಲ್ಲಿ ಭಾಸ್ಕರ್ ಎಂಬುವರು ಉತ್ಸವಗಳಿಗೆ ಆನೆಗಳನ್ನು ಬಾಡಿಗೆ ನೀಡುತ್ತಾರೆ. ಅದರಂತೆ ಬನ್ನೇರುಘಟ್ಟದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ದಸರಾ ಉತ್ಸವಕ್ಕೆ ಈ ಆನೆಯನ್ನು ಕರೆತರಲಾಗಿತ್ತು.