ಜಿಲ್ಲೆ

ತೆರೆಯದ ಸೂರ್ಯಕಾಂತಿ ಖರೀದಿ ಕೇಂದ್ರ

ಲಲಾಟಾಕ್ಷ ಎಸ್

ಗುಂಡ್ಲುಪೇಟೆ: ತಾಲೂಕಿನಲ್ಲಿ ಸೂರ್ಯಕಾಂತಿ ಕಟಾವು ಆರಂಭವಾಗಿದ್ದರೂ ಜಿಲ್ಲಾಡಳಿತ ಖರೀದಿ ಕೇಂದ್ರ ತೆರೆಯದ ಬಗ್ಗೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಲೂಕಿನಲ್ಲಿ ಒಟ್ಟು 11,800 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಇದರಲ್ಲಿ ಪೂರ್ವ ಮುಂಗಾರು ಮಳೆಗೆ ಬಿತ್ತನೆ ಮಾಡಿರುವ ಶೇ.70 ಸೂರ್ಯಕಾಂತಿ ಕಟಾವಿಗೆ ಬಂದಿದೆ. ಕಳೆದ ಎರಡು ತಿಂಗಳಿಂದ ಸುರಿಯುತ್ತಿದ್ದ ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಸೂರ್ಯಕಾಂತಿ ಕಟಾವು ಮಾಡಲಾಗುತ್ತಿದೆ. ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಕ್ವಿಂಟಾಲ್‌ಗೆ 7,280 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ.


ತೆರೆಯದ ಖರೀದಿ ಕೇಂದ್ರಗಳು:
ಜಿಲ್ಲೆಯಲ್ಲಿ ರೈತರು ಸೂರ್ಯಕಾಂತಿ ಕಟಾವು ಆರಂಭಿಸುವ ಮೊದಲೇ ಖರೀದಿ ಕೇಂದ್ರ ತೆರೆಯುವಂತೆ ಹಲವಾರು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ, ಜಿಲ್ಲಾಡಳಿತ ಖರೀದಿ ಕೇಂದ್ರ ತೆರೆಯದ ಪರಿಣಾಮ ರೈತರು 4 ರಿಂದ 4.5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.

ಸೂರ್ಯಕಾಂತಿ ಬೆಳೆಗಾರರಿಗೆ ನಷ್ಟವಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಬೆಂಬಲ ಬೆಲೆ ಪ್ರಕಟಿಸಿ ಅನುದಾನ ಮೀಸಲಿರಿಸಿದೆ. ಈ ಬಾರಿ ತಾಲೂಕಿನಲ್ಲಿ ಸುಮಾರು 40 ರಿಂದ 45 ಕೋಟಿ ರೂ.ನಷ್ಟು ಸೂರ್ಯಕಾಂತಿ ಬೆಳೆ ಖರೀದಿಸಬಹುದು. ಸೆ.10 ರ ವೇಳೆಗೆ ಖರೀದಿ ಕೇಂದ್ರ ತೆರೆಯಲಾಗುತ್ತದೆ. ಆದ್ದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡದೆ ಸ್ವಲ್ಪ ದಿನಗಳ ಕಾಲ ಸಹನೆಯಿಂದ ಕಾದರೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದು.
ಎಸ್.ಎಂ.ನಾಗಾರ್ಜುನ ಕುಮಾರ್, ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ