ರಾಗಿ ಮಧ್ಯೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದ ಹುಚ್ಚೆಳ್ಳಿನಿಂದ ರೈತರೇಕೊ ಇತ್ತೀಚಿನ ವರ್ಷಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದು, ಬರಿ ರಾಗಿಯನ್ನಷ್ಟೇ ಬೆಳೆಯುತ್ತಿದ್ದಾರೆ.
ಕಡಿಮೆ ಮಳೆ ಸಾಂದ್ರತೆಯಲ್ಲೂ ಉತ್ತಮ ಇಳುವರಿ ಕೊಡುವ ಈ ಬೆಳೆ, ಮೂರು, ಮೂರೂವರೆ ತಿಂಗಳಲ್ಲಿ ಸಲು ರೈತನ ಕೈಸೇರುತ್ತದೆ. ರಾಗಿ ಕಟಾವು ಸಮಯಕ್ಕೆ ಹುಚ್ಚೆಳ್ಳಿನ ಕಟಾವು ಆರಂಭವಾಗಿರುತ್ತಿತ್ತು. ದೀಪಾವಳಿ ಅಥವಾ ನವೆಂಬರ್‌ನಲ್ಲಿ ಬೆಳೆ ಹೂವು ಬಿಟ್ಟಾಗ ಇಡೀ ರಾಗಿ ಹೊಲಕ್ಕೆ ಹಳದಿ ಬಣ್ಣದ ಸೀರೆ ತೋಡಿಸಿ, ಹೊನ್ನು ಚೆಲ್ಲಿದ್ದಾರೇನೋ ಎಂಬತೆ ಭಾಸವಾಗುತ್ತಿತ್ತು. ಈ ಹೂವನ್ನೇ ಕಿತ್ತು ತಂದು ಮನೆ ಮುಂದಿನ ದೀಪಗಳಿಗೆ ಅಂಟಿಸಿ ಹಬ್ಬ ಆಚರಿಸುತ್ತಿದ್ದೆವು. ಆದರಿಂದು ಯಾವ ರೈತರ ಹೊಲಗಳಲ್ಲೂ ಹುಚ್ಚೆಳ್ಳು ಕಾಣದಾಗಿದೆ ಎನ್ನುತ್ತಾರೆ ಅವ್ವೇರಹಳ್ಳಿಯ ರೇಣುಕಯ್ಯ.
ಹುಚ್ಚೆಳ್ಳು ಎಣ್ಣೆಕಾಳು ಬೆಳೆಯಾಗಿದ್ದು, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಈ ಭಾಗದ ಜನರ ಪ್ರಮುಖ ಆಹಾರ. ಆರೋಗ್ಯ ವರ್ಧಿತ ಪೌಷ್ಟಿಕಾಂಶಗಳನ್ನು ಹೊಂದಿರುವ ಹುಚ್ಚೆಳ್ಳನ್ನು ಈ ಹಿಂದೆ ಜಿಲ್ಲೆಯಲ್ಲಿ 50 ರಿಂದ 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಪ್ರಸಕ್ತ ವರ್ಷದಲ್ಲಿ ಒಂದು ಎಕರೆ ಪ್ರದೇಶದಲ್ಲಿಯೂ ಬೆಳೆ ಕಾಣಿಸದಂತಾಗಿದೆ. ರಾಗಿ ಮಧ್ಯೆ ಕಂಗೊಳಿಸುತ್ತಿದ್ದ ಹುಚ್ಚೆಳ್ಳು ಹೂವು ದಿನದಿಂದ ದಿನಕ್ಕೆ ಕಮರುತ್ತಿವೆ.
ಬದಲಾದ ಆಹಾರ, ಜೀವನ ಪದ್ಧತಿಯಿಂದ ಗ್ರಾಮೀಣ ಜನರೂ ಸಹ ಜಂಕ್‌ುಡ್‌ಗೆ ಮಾರುಹೋಗುತ್ತಿರುವುದರಿಂದ ಹುಚ್ಚೆಳ್ಳು ಸೇರಿದಂತೆ ಬಹುತೇಕ ಎಣ್ಣೆಕಾಳುಗಳ ಬೇಡಿಕೆ ದಿನೇದಿನೆ ಕುಸಿಯುತ್ತಿದೆ. ಹುಚ್ಚೆಳ್ಳು ಬೆಳೆದರೂ ಖರೀದಿಸುವವರು ಇಲ್ಲದಂತಾಗಿದೆ. ಇದೇ ಕಾರಣಕ್ಕೆ ರೈತರು ಬೆಳೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.