ನಾಗಮಂಗಲ: ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ನಾವು ಎನ್ನುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಅಂದು ಇವರೆಲ್ಲ ಏನು ಖಾವಿ ಧರಿಸಿಕೊಂಡಿದ್ರಾ? ಇವರೇನು ಸಚಿವರಾಗಲಿಲ್ಲವೇ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎಂಆರ್‌ಪಿ ಸಮುದಾಯ ಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಸ್ತುವಾರಿ ಸಚಿವರಾದಿಯಾಗಿ ಮತ್ತೊಬ್ಬರ ಹೆಸರೇಳೊದು ಬೇಡ. ಕುಮಾರಸ್ವಾಮಿ ಅವರ ಸಿಎಂ ಆದಾಗ ನೀವು ಏನೂ ಅಪೇಕ್ಷೆ ಇಟ್ಟಿರಲಿಲ್ಲವೆ ಎಂದು ಪ್ರಶ್ನಿಸಿದ ಅವರು, ಉಸ್ತುವಾರಿ ಮಂತ್ರಿಗಳ ಹಿರಿತನಕ್ಕೆ ಗೌರವವಿದೆ. ಆದರೆ ರಾಜಕಾರಣದಲ್ಲಿ ಬೆಳೆದಿರುವುದಕ್ಕೆ ಆತ್ಮಸಾಕ್ಷಿ ಕೇಳಿಕೊಳ್ಳಬೇಕು ಎಂದರು.
ಎಚ್‌ಡಿಡಿ, ಎಚ್‌ಡಿಕೆ ಹಾಗೂ ಜನತಾದಳದ ಕಾರ್ಯಕರ್ತರ ಶ್ರಮವಿಲ್ಲದೆ ಬೆಳೆದಿದ್ದಾರಾ ಎಂಬುದರ ಕುರಿತು ಆತ್ಮಸಾಕ್ಷಿ ಕೇಳಿಕೊಳ್ಳಲಿ. ಲೊಕಸಭೆ ಚುನಾವಣೆಯಲ್ಲಿ ನಾಗಮಂಗಲದ ಜನತೆ ಜಿಲ್ಲೆಯಲ್ಲಿಯೇ ಹೆಚ್ಚು ಲೀಡ್ ಕೊಟ್ಟರು. 6 ಜನರ ಶಾಸಕರನ್ನು ಕೊಟ್ಟ ಜಿಲ್ಲೆಗೆ ಛತ್ರಿಗಳು ಎನ್ನುವ ಬಿರುದನ್ನು ಕೊಡಲಾಗಿದೆ ಎಂದು ಲೇವಡಿ ಮಾಡಿದರು.
ಬೇರೆ ಕ್ಷೇತ್ರದತ್ತ ಸಿಆರ್‌ಎಸ್ ಕಣ್ಣು: ಸಚಿವ ಎನ್.ಚಲುವರಾಯಸ್ವಾಮಿ 30 ರಿಂದ 40 ಸಾವಿರ ಲೀಡ್‌ನಲ್ಲಿ ಗೆದ್ದಿಲ್ಲ. 2ರಿಂದ 3 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರ ಬಿಟ್ಟರೂ ಅಚ್ಚರಿಪಡಬೇಕಿಲ್ಲ. ಬೇರೆ ಕ್ಷೇತ್ರದ ಕಡೆಗೆ ಸಚಿವರ ಕಣ್ಣು ಹೋಗಿದೆ. ಸಚಿವರ ದರ್ಪ, ಅಹಂಕಾರ, ದೌರ್ಜನ್ಯಕ್ಕೆ ನಾಗಮಂಗಲದ ಜನ ಮನೆಗೆ ಕಳುಹಿಸುವ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮನಿ, ಹನಿ ಟ್ರಾೃಪ್ ಸರ್ಕಾರದ ಸಾಧನೆ: ಮನಿ, ಹನಿ, ಜನರಿಗೆ ತೆರಿಗೆ ಟ್ರಾೃಪ್‌ನಲ್ಲಿಯೇ ರಾಜ್ಯ ಸರ್ಕಾರ ಕಲ ಕಳೆಯುತ್ತಿದೆ. ಸ್ವಪಕ್ಷದ ಶಾಸಕರ ವಿರುದ್ಧವೇ ಹನಿ, ಮನಿ ಟ್ರ್ಯಾಪ್ ಮಾಡಿಸುತ್ತಿರುವುದು ಒಂದು ಕಡೆಯಾದರೆ ಜನರಿಗೆ ತೆರಿಗೆ ಟ್ರಾೃಪ್ ಮೂಲಕ ಹಣ ವಸೂಲಿ ಮಾಡುತ್ತಿದೆ ಎಂದರು.
ಸುರೇಶ್‌ಗೌಡ ಹೆಬ್ಬುಲಿ: ಜೆಡಿಎಸ್ ಕಾರ್ಯಕರ್ತರು ಹುಲಿಗಳಾದರೆ ತಾಲೂಕಿನ ಕಾರ್ಯಕರ್ತ ಹುಲಿಗಳಿಗೆ ಹೆಬ್ಬುಲಿಯಾಗಿ ಸುರೇಶ್‌ಗೌಡ ಪ್ರತಿನಿಧಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಸರ್ಕಾರ ಬೊಗಳೆ ಭಾಷಣ ಮಾಡೊದು ಬೇಡ. ಕುಮಾರಸ್ವಾಮಿ ಅವರಿ ಕೇಂದ್ರದಲ್ಲಿ ಸಚಿವರಾಗಿರುವುದನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಜಿಲ್ಲೆಯ 7 ತಾಲೂಕುಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ನೀಡಲು ಕುಮಾರಸ್ವಾಮಿ ಬದ್ಧರಾಗಿದ್ದಾರೆ. ಇದಕ್ಕಾಗಿ ಎಲ್ಲ ತಾಲೂಕುಗಳಲ್ಲಿ ಭೂಮಿ ಗುರುತು ಮಾಡಿಕೊಡಿ ಎಂದು ಸವಾಲು ಹಾಕಿದರು.
ನಾಗಮಂಗಲ ಪ್ರಥಮ: ಜೆಡಿಎಸ್‌ನ ಡಿಜಿಟಲ್ ಸದಸ್ಯತ್ವ ನೊಂದಣಿಯಲ್ಲಿ ರಾಜ್ಯದಲ್ಲಿಯೇ ನಾಗಮಂಗಲ ವಿಧಾನಸಭಾ ಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ. ಮಿಸ್ಡ್ ಕಾಲ್ ಕೊಡುವ ಮೂಲಕ ಪಕ್ಷದ ಸದಸ್ಯತ್ವ ಪಡೆಯಬೇಕು. ನಾಗಮಂಗಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈಗಿನ ಶಾಸಕ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಟ್ಟ ಅಧಿಕಾರಿಗಳನ್ನು ತಾಲೂಕಿಗೆ ಹಾಕಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರ ಘೋಷಣೆ ಕೂಗಿ ಬೃಹತ್ ಹೂವಿನ ಹಾರ ಹಾಕಿ ಕಾರ್ಯಕರ್ತರು ಫೋಟೋ ಕ್ಲಿಕ್ಕಿಸಿಕೊಂಡರು. ಶಾಸಕ ಎಚ್.ಟಿ.ಮಂಜುನಾಥ್ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿ.ಪಂ.ಮಾಜಿ ಸದಸ್ಯ ಶಿವಪ್ರಕಾಶ್, ಮುತ್ತಣ್ಣ, ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು, ಮುಖಂಡರಾದ ಗೌರೀಶ್, ಯದುರಾಜು, ರಾಮಸ್ವಾಮಿಗೌಡ, ಪುರಸಭೆ ಸದಸ್ಯ ಚನ್ನಪ್ಪ, ಶಂಕರಲಿಂಗೇಗೌಡ, ವಿಜಯ್ ಕುಮಾರ್, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಮತ್ತಿತರರಿದ್ದರು.