ಜಿಲ್ಲೆ

ಒಂಭತ್ತು ಕ್ವಿಂಟಾಲ್​ ಕರದಂಟು ಅರ್ಪಣೆ

Kopala - Raveendra V K

ಕೊಪ್ಪಳ: ಜಾಗೃತಿ ಮೂಲಕ ನಾಡಿನ ಮನೆ ಮಾತಾದ ಗವಿಮಠ ಜಾತ್ರೆಯಲ್ಲಿ ಮಹಾದಾಸೋಹ ಮುಂದುವರೆದಿದೆ. ಭಕ್ತರು ನಾನಾ ಖಾದ್ಯಗಳು, ರೊಟ್ಟಿ ಹಾಗೂ ತರಕಾರಿ ಸೇರಿ ಇತರ ದವಸ, ಧಾನ್ಯ ಅರ್ಪಿಸುವುದು ಮುಂದುವರೆದಿದೆ. ಇದೀಗ ಕೊಪ್ಪಳ ತಾಲೂಕು ಲಾರಿ ಮಾಲೀಕರ ಸಂಘದವರು 10 ಕ್ವಿಂಟಾಲ್​ ಕರದಂಟು ಅರ್ಪಿಸಿದ್ದಾರೆ.

ಸಂಘದಲ್ಲಿ ಬಹುತೇಕರು ಮುಸ್ಲಿಂ ಬಾಂಧವರಿದ್ದಾರೆ. ಅಜ್ಜನ ಜಾತ್ರೆಗೆ ತಮ್ಮದೂ ಒಂದು ಸೇವೆ ಇರಲಿ ಎಂದು ಕರದಂಟು ಸಿಹಿ ತಯಾರಿಸಿ ಬುಧವಾರ ಅರ್ಪಿಸಿದ್ದಾರೆ. ಸಂದಲ್ಲಿ ಸುಮಾರು 45&50 ಸದಸ್ಯರಿದ್ದಾರೆ. ಎಲ್ಲರೂ ಸೇರಿ 5 ಕ್ವಿಂಟಾಲ್​ ಸಕ್ಕರೆ, 2 ಕ್ವಿಂಟಾಲ್​ ಪುಟಾಣಿ ಹಿಟ್ಟು, 8 ಕೆಜಿ ಕೊಬ್ಬರಿ, 1 ಕೆಜಿ ಗಸಗಸೆ, ಅರ್ಧ ಕೆಜಿ ಯಾಲಕ್ಕಿ, 6 ಕೆಜಿ ತುಪ್ಪ ಹಾಗೂ 10 ಕೆಜಿ ಶೇಂಗಾ ಎಣ್ಣೆ ಕ್ರೋಢಿಕರಿಸಿ ಕರದಂಟು ತಯಾರಿಸಿದ್ದಾರೆ.

ಮಂಗಳವಾರ 8 ಅಡುಗೆ ತಯಾರಕರು ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಸಿಹಿ ತಯಾರಿಸಿದರು. ಸಂದ ಸದಸ್ಯರು ಅವರಿಗೆ ನೆರವಾಗಿದ್ದಾರೆ. ಹಿಟ್ಟು ಬೆರೆಸುವುದ, ಒಣಗಿಸುವುದು ಬಳಿಕ ಅವುಗಳನ್ನು ತುಂಡುಗಳಾಗಿ ಕತ್ತಿರಿಸಿ ಬಾಕ್ಸ್​ಗೆ ತುಂಬಿದ್ದಾರೆ. ಬುಧವಾರ ಗವಿಮಠದ ಮಹಾ ದಾಸೋಹಕ್ಕೆ ಸಮರ್ಪಿಸಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಚ್​.ಎಂ.ಹುಸೇನಿ, ಕಾರ್ಯದರ್ಶಿ ಅಮೀರ್​ ಅಲಿ, ಉಪಾಧ್ಯಕ್ಷರಾದ ಹುಸೇನ್​ ಬಾಷಾ ಸಂಡೂರು, ಸೈಯ್ಯದ್​ ಸಾದಿಕ್​ ಅಲಿ ಖಾದ್ರಿ, ಸಹ ಕಾರ್ಯದರ್ಶಿ ಶರಣಗೌಡ ಪಾಲೀಲ್​, ಖಜಾಂಚಿ ಚಾಂದ್​ ಪಾಷಾ ಮತ್ತು ಇತರ ಸದಸ್ಯರು ಇದ್ದರು.