ಜಿಲ್ಲೆ

ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ 15ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನ. 15ರಿಂದ 28ರವರೆಗೆ ಜಿಲ್ಲೆಯಲ್ಲಿ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿವೆ ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬ್ಯಾನರ್, ಪೋಸ್ಟರ್, ಬಿತ್ತಿ ಚಿತ್ರಗಳನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸಕ್ತ ಸಾಲಿನ ಕಾರ್ಯಕ್ರಮವು ಅತಿಸಾರ ಬೇಧಿಯ ಶೂನ್ಯ ಬಾಲ್ಯದ ಸಾವುಗಳ ಕಡೆಗೆ ತೀವ್ರ ಪ್ರಯತ್ನ ವಹಿಸುವ ಘೋಷ ವಾಕ್ಯವಾಗಿದೆ. 0-5 ವರ್ಷದ ಮಕ್ಕಳಿಗೆ ಅತಿಸಾರ ಭೇದಿಯಾದಾಗ ಓಆರ್‌ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ನೀಡುವುದರ ಮೂಲಕ ಅತಿಸಾರದಿಂದ ಆಗುವ ಹಾನಿ ತಡೆಗಟ್ಟಬಹುದು. ಮಕ್ಕಳಲ್ಲಿ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು ನಿಗದಿತ ಪ್ರಮಾಣದಲ್ಲಿ ಓಆರ್‌ಎಸ್ ನೀಡುವುದರಿಂದ ಶಮನಗೊಳಿಸಬಹುದು ಎಂದರು.
ಶುಚಿತ್ವ ಕಾಪಾಡಿಕೊಳ್ಳುವುದರಿಂದ ಅತಿಸಾರ ಉಂಟಾಗದಂತೆ ನೋಡಿಕೊಳ್ಳಬಹುದು. ಸರಿಯಾಗಿ ಕೈ ತೊಳೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತಂತೆ ಅಂಗನವಾಡಿ ಶಾಲೆಗಳು ಮತ್ತು ಸಮುದಾಯದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಜನಜಾಗೃತಿ ಮೂಡಿಸಲಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಸಿಬ್ಬಂದಿ, ಇತರರು ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀ ಸ್ವಾಗತಿಸಿದರು. ಡಾ. ಸುಜಾತ ಹಸವಿಮಠ ನಿರೂಪಿಸಿದರು.