ಹುಬ್ಬಳ್ಳಿ: ಆಶಾ ಡಯಾಬಿಟಿಕ್ ಟ್ರಸ್ಟ್ ಹಾಗೂ ರೀಸರ್ಚ್ ಫೌಂಡೇಷನ್ ವತಿಯಿಂದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಜಾಗೃತಿ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಅ. 16ರಂದು ಬೆಳಗ್ಗೆ 10.30ಕ್ಕೆ ನಗರದ ಕೆಎಲ್ಇ ತಾಂತ್ರಿಕ ವಿವಿ ಬಯೋಟೆಕ್ನಾಲಜಿ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಕಾರ್ಯದರ್ಶಿ ಹಾಗೂ ತಜ್ಞ ವೈದ್ಯ ಡಾ. ಜಿ.ಬಿ. ಸತ್ತೂರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಕೆಎಲ್ಇ ಟೆಕ್ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವಿಕಂಶಿ ಅಧ್ಯಕ್ಷತೆ ವಹಿಸುವರು ಎಂದರು.
ಆರೋಗ್ಯವಂತ ಯುವಕರು, ಆರೋಗ್ಯಕರ ರಾಷ್ಟ್ರ ಘೋಷಣೆಯಡಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ ಕೈಗೊಳ್ಳಲಾಗುವುದು. ಆಶಾ ಪ್ರತಿಷ್ಠಾನ 20 ವರ್ಷದಿಂದ 250 ಶಿಬಿರ, 50 ಬೈಪಾಸ್ ಸರ್ಜರಿ ಮಾಡಿದೆ. ಇದೀಗ ಹುಬ್ಬಳ್ಳಿ ಧಾರವಾಡ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಮಧುಮೇಹ ಹಾಗೂ ರಕ್ತದ ಒತ್ತಡ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಭಾರತದಲ್ಲಿ 75 ದಶಲಕ್ಷಕ್ಕಿಂತ ಹೆಚ್ಚು ಜನರು ಇದರಿಂದ ಬಳಲುತ್ತಿದ್ದಾರೆ. ಬದಲಾದ ಜೀವನಶೈಲಿ ಇದಕ್ಕೆ ಮುಖ್ಯ ಕಾರಣ. ಈ ಬಗ್ಗೆ ಪ್ರತಿಷ್ಠಾನವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯುವಕ ಯುವತಿಯರ ಯೋಗಕ್ಷೇಮಕ್ಕಾಗಿ ಮೀಸಲಾಗಿರುವ ಉಚಿತ ಶಿಬಿರದಲ್ಲಿ ಬಿಪಿ, ಶುಗರ್ ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಗುತ್ತದೆ. ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸುವರು ಎಂದರು.
2025- 26ರಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ ನಡೆಸುವ ಉದ್ದೇಶ ಹೊಂದಲಾಗಿದೆ. ಬಿಪಿ ತಪಾಸಣೆ ಯಂತ್ರ, ಇಸಿಜಿ ಯಂತ್ರವನ್ನು ಉದ್ಯಮಿ ಎಂ.ವಿ. ಕರಮರಿ ಅವರು ಕೊಡುಗೆ ನೀಡಿದ್ದಾರೆ ಎಂದರು.
ಆಧುನಿಕ ಜೀವನಶೈಲಿಯಿಂದ ಒಂದಿಷ್ಟು ಹೊರಗೆ ಬಂದು ನಿತ್ಯವೂ ವ್ಯಾಯಾಮ, ದೈಹಿಕ ಪರಿಶ್ರಮದ ಕೆಲಸ ಮಾಡಬೇಕು. ನಡಿಗೆ, ವಾಯುವಿಹಾರ ಮುಂತಾದ ಕ್ರಮಗಳಿಂದ ಇಂತಹ ಕಾಯಿಲೆಗಳಿಂದ ದೂರ ಇರಬಹುದು ಎಂದು ಸಲಹೆ ನೀಡಿದರು.
ಫೌಂಡೇಷನ್ ಪದಾಧಿಕಾರಿಗಳಾದ ಜೆ.ಸಿ. ಮಠದ, ಎಂ.ವಿ. ಕರಮರಿ, ಕೇವಲ್ ಲುಂಕರ್ ಗೋಷ್ಠಿಯಲ್ಲಿದ್ದರು.