ಜಿಲ್ಲೆ

ಆಧುನಿಕ ಜೀವನ ಶೈಲಿಯೇ ಸಕ್ಕರೆ ಕಾಯಿಲೆ ಮೂಲ

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕ ಜೀವನ ಶೈಲಿಯೇ ಸಕ್ಕರೆ ಕಾಯಿಲೆಯ ಮೂಲ. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಜನರಲ್ಲಿ ಮಧುಮೇಹ ಕಾಯಿಲೆ ಕಂಡು ಬರುತ್ತಿರುವುದು ಆತಂಕಕಾರಿ ಸಂಗತಿ ಎಂದು ಮಧುಮೇಹ ತಜ್ಞ ಡಾ. ಶಿವಕುಮಾರ ತುರಮರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಪರಿಹಾರ ಕುರಿತು ಉಪನ್ಯಾಸ ನೀಡಿದರು.
ದೇಶದಲ್ಲಿ 2006ರ ವರದಿ ಪ್ರಕಾರ ಶೇ. 90ರಷ್ಟು ಜನರಲ್ಲಿ ಸಕ್ಕರೆ ಕಾಯಿಲೆ ಇರುವುದು ಕಂಡು ಬಂದಿದೆ. ಈ ಕಾಯಿಲೆಯಿಂದ ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಇತ್ಯಾದಿ ಗಂಭೀರ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಜೀವನ ಶೈಲಿಯಲ್ಲಿ ಬದಲಾವಣೆ, ಹಿತಮಿತ ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಆತ್ಮವಿಶ್ವಾಸದಿಂದ ಇದನ್ನು ನಿಯಂತ್ರಣದಲ್ಲಿರಿಸಿಕೊಂಡು ಆರೋಗ್ಯಕರ ಜೀವನ ಸಾಗಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಪಿ. ಶೆಟ್ಟರ್ ಮಾತನಾಡಿ, ಇತ್ತೀಚೆಗೆ ಫಾಸ್ಟ್‌ಫುಡ್, ಜಂಕ್ ಫುಡ್, ಇತ್ಯಾದಿ ಅನಾರೋಗ್ಯಕರ ಆಹಾರ ಪದಾರ್ಥಗಳ ಸೇವನೆ ಮತ್ತು ದೈಹಿಕ ಶ್ರಮ ಇಲ್ಲದಕ್ಕೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವೈದ್ಯರು ನೀಡುವ ಔಷಧಿ ಜತೆಗೆ ರೋಗಿ ಸ್ವತಃ ರೋಗದ ಹತೋಟಿಗೆ ಮನಸು ಮಾಡಿದಾಗ ಮಾತ್ರ ಆರೋಗ್ಯಪೂರ್ಣ ಜೀವನ ಸಾಗಿಸಲು ಸಾಧ್ಯ ಎಂದರು.
ಡಾ. ಸಂಜೀವ ಕುಲಕರ್ಣಿ, ವಿಶ್ವೇಶ್ವರಿ ಹಿರೇಮಠ, ಡಾ. ವೀಣಾ ಬಿರಾದಾರ, ಡಾ. ಸಂಗಯ್ಯ ಶಿವಪ್ಪಯ್ಯನಮಠ, ನಿಂಗಣ್ಣ ಕುಂಟಿ, ಬಿ.ಎಲ್. ಪಾಟೀಲ, ಸುಜಾತಾ ಹಡಗಲಿ, ಪ್ರಭಾ ನೀರಲಗಿ, ಮಮತಾ ಪಾಟೀಲ, ಡಾ. ವೀರಪ್ಪ ಪೂಜಾರ, ಸಂಗಮೇಶ ಹಡಪದ, ಡಾ. ಎಸ್. ಬಿ. ಗಾಡಿ, ಎಸ್. ಬಿ. ಗುತ್ತಲ, ಇತರರು ಇದ್ದರು.
ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವಿದ್ವಾನ ನವೀನಶಾಸ್ತ್ರಿ ಪುರಾಣಿಕ ವಂದಿಸಿದರು.