ಮುದ್ದೇಬಿಹಾಳ ಪಟ್ಟಣದ ಹುಡ್ಕೋದ ಗವಿಸಿದ್ಧೇಶ್ವರ ವೇದಿಕೆಯಲ್ಲಿ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಲಾಯಿತು. ನಿರಂಜನ ಸ್ವಾಮೀಜಿ, ಮಹಿಬೂಬ ಗೊಳಸಂಗಿ, ಪ್ರಭಾಕರ ಪದಕಿ, ಪ್ರೇಮಾ ಗುಡದಿನ್ನಿ, ಸಂಗಮ್ಮ ದೇವರಳ್ಳಿ, ಪ್ರೀತಿ ದೇಗಿನಾಳ, ಸಿ.ಪಿ.ಸಜ್ಜನ, ರುದ್ರೇಶ ಕಿತ್ತೂರ ಇತರರಿದ್ದಾರೆ.  
ಜಿಲ್ಲೆ

ಧ್ಯಾನಯೋಗ ಕಾರ್ಯಕ್ರಮಕ್ಕೆ ಚಾಲನೆ

ಮುದ್ದೇಬಿಹಾಳ: ಪಟ್ಟಣದ ಹುಡ್ಕೋದ ಗವಿಸಿದ್ಧೇಶ್ವರ ವೇದಿಕೆ ಆವರಣದಲ್ಲಿ ಯೋಗೋತ್ಸವ ಸಮಿತಿ, ಪ್ರಗತಿ ಜೆಸಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಡಿ.11ರವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ನಡೆಯಲಿರುವ ಧ್ಯಾನಯೋಗ, ಸಾಮೂಹಿಕ ಭಜನೆ, ಇಷ್ಟಲಿಂಗ ಪೂಜೆ, ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಯಿತು.

ಹಿಮಾಲಯದಲ್ಲಿ 6 ವರ್ಷ ಯೋಗ ಸಾಧನೆ ಮಾಡಿರುವ ನಿರಂಜನ ಸ್ವಾಮೀಜಿ ಬೆಳಗ್ಗೆ ವೇದಿಕೆ ಆವರಣದಲ್ಲಿ ಯೋಗದ ವಿವಿಧ ಆಸನಗಳನ್ನು ಹೇಳಿಕೊಡುವ ಮೂಲಕ ಧ್ಯಾನಯೋಗಕ್ಕೆ ಚಾಲನೆ ನೀಡಿದರು.

ಹುಡ್ಕೋದಲ್ಲಿರುವ ನಿವೃತ್ತ ಶಿಕ್ಷಕ ಎಸ್.ಆರ್.ಗೌಡರ ಅವರ ನಿವಾಸದ ಮಾಳಿಗೆಯಲ್ಲಿ ಸ್ವಾಮೀಜಿ ಇಷ್ಟಲಿಂಗ ಪೂಜೆ ನಡೆಸಿಕೊಟ್ಟರು.

ಸಂಜೆ ವೇದಿಕೆಯಲ್ಲಿ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಲಾಯಿತು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ನಿರಂಜನ ಸ್ವಾಮೀಜಿಯವರು, ಯೋಗಶಿಕ್ಷಕರಾದ ಪ್ರಭಾಕರ ಪದಕಿ, ಪ್ರೇಮಾ ಗುಡದಿನ್ನಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಯೋಗ ಸಮಿತಿಯ ಪ್ರಭುರಾಜ ಕಲಬುರ್ಗಿ, ಸಿ.ಪಿ.ಸಜ್ಜನ, ಸಂಚಾಲಕ ಮುಖ್ಯಾಧ್ಯಾಪಕ ರುದ್ರೇಶ ಕಿತ್ತೂರ ಸೇರಿ ಹಲವರು ಪಾಲ್ಗೊಂಡಿದ್ದರು.

11ರವರೆಗೆ ನಿತ್ಯ ಸಂಜೆ 6-30ರಿಂದ 7-30ರವರೆಗೆ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಸ್ವಾಮೀಜಿ ಅವರ ಯೋಗ ಸೇವೆ ಬೀದರ್ ಜಿಲ್ಲೆಯಿಂದ ಪ್ರಾರಂಭಗೊಂಡಿದ್ದು ಇಲ್ಲಿಗೆ ಬರುವುದಕ್ಕೂ ಮೊದಲು ತಾಳಿಕೋಟೆ ಪಟ್ಟಣದಲ್ಲಿ ಶಿಬಿರ ನಡೆಸಿಕೊಟ್ಟಿದ್ದಾರೆ. ಡಿ.11 ರವರೆಗೆ ಧ್ಯಾನಯೋಗ ಮುಗಿದ ನಂತರ ನಿತ್ಯವೂ ಆಹ್ವಾನ ನೀಡುವ ಭಕ್ತರ ಮನೆಯಲ್ಲಿ ಸ್ವಾಮೀಜಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸಿಕೊಡುವರು.