ಜಿಲ್ಲೆ

ಪರೋಪಕಾರದಿಂದ ಸಮಾಜದಲ್ಲಿ ಉನ್ನತ ಸ್ಥಾನ ಸಾಧ್ಯ: ಲೋಕಾಯುಕ್ತ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಾಥ್​ ಜೋಶಿ ಅಭಿಮತ

Bengaluru - General - Rama Kishan K V

ಬೆಂಗಳೂರು: ಭಾರತ ಭೋಗ ಭೂಮಿಯಲ್ಲ, ತ್ಯಾಗ ಭೂಮಿ. ಇಂತಹ ಪುಣ್ಯ ದೇಶದಲ್ಲಿ ನಾವು ಎಷ್ಟು ತ್ಯಾಗ ಮಾಡುತ್ತೇವೆಯೋ, ಅಷ್ಟು ಒಳ್ಳೆಯ ಹೆಸರು ಗಳಿಸುತ್ತೇವೆ ಎಂದು ಲೋಕಾಯುಕ್ತ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಾಥ್​ ಜೋಶಿ ಹೇಳಿದ್ದಾರೆ.

ಬೆಂಗಳೂರು ಕಿಡ್ನಿ ಫೌಂಡೇಷನ್​ ಗಾಯನ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ 19ನೇ 'ಧ್ವನಿ'-ಬಿಕೆಎಫ್​ ಪಂಡಿತ್​ ಮಲ್ಲಿಕಾರ್ಜುನ ಮನ್ಸೂರ್​ ಹಿಂದೂಸ್ತಾನಿ ಸಂಗೀತೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೋಪಕಾರ ಗುಣ ಇಲ್ಲದ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಸಾಧ್ಯವಿಲ್ಲ. ತ್ಯಾಗ ಭಾರತೀಯರ ರಕ್ತದಲ್ಲಿದೆ. ಉತ್ತಮ ವಿದ್ಯೆ ಇದೆ, ಉತ್ತಮ ನೌಕರಿಯಲ್ಲಿದ್ದೇನೆ ಎಂಬ ಅಹಂ ಅನೇಕರಲ್ಲಿದೆ. ಮಾಡುತ್ತಿರುವ ಕೆಲಸದ ಮೂಲಕ ಸಮಾಜದ ಕಷ್ಟಗಳಿಗೆ ಎಷ್ಟು ನೆರವಾಗಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಬಹಳಷ್ಟು ಜನರು ತ್ಯಾಗ ಜೀವಿಗಳಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿದ್ದಾರೆ. ನಮ್ಮಲ್ಲಿರುವ "ಧನ'ಕ್ಕೆ "ತ್ಯಾಗ'ದಿಂದ ಬೆಲೆ ಬರುತ್ತದೆ ಎಂದರು.

ಅಕಾಡೆಮಿ ಫಾರ್​ ಕ್ರಿಯೇಟಿವ್​ ಟೀಚಿಂಗ್​ ಅಧ್ಯಕ್ಷ ಗುರುರಾಜ ಕರ್ಜಗಿ ಮಾತನಾಡಿ, ಇಂದಿನ ಕಾಲಟ್ಟದಲ್ಲಿ ಒಂದೆರಡು ಪ್ರಶಸ್ತಿ ಬರುತ್ತಿದ್ದಂತೆ ವ್ಯಕ್ತಿತ್ವ ಬದಲಾಗುತ್ತದೆ. ಆದರೆ ಪಂಡಿತ್​ ಮಲ್ಲಿಕಾರ್ಜುನ ಮನ್ಸೂರ್​ ಶ್ರೇಷ್ಠ ಗಾಯಕರಾಗಿದ್ದರು. ಹಲವು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು. ಅವರು ಉನ್ನತ ಶಿಖರದಲ್ಲಿದ್ದರೂ, ಮಣ್ಣಿನ ವಾಸನೆ ಮರೆತಿರಲಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಂಡಿತ್​ ವೆಂಕಟೇಶಕುಮಾರ್​ ಅವರಿಗೆ ಬಿಕೆಎ್​ ಪಂ.ಮಲ್ಲಿಕಾರ್ಜುನ ಮನ್ಸೂರ್​ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದ್ಯ ಡಾ.ವಿವೇಕ ಜವಳಿ, ಬಿಕೆಎಫ್​ ಫೌಂಡೇಷನ್​ನ ಚೇರ್ಮನ್​ ಡಾ. ಶ್ರೀರಾಮ್​, ಟ್ರಸ್ಟಿ ಡಾ.ಶ್ರೀನಿವಾಸ್​ ಇತರರಿದ್ದರು.

ಕಲಿತ ವಿದ್ಯೆಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪ್ರತಿಯೊಬ್ಬನ ಬದುಕಿನಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ. ಇಂದು ನನ್ನ ಗುರುಗಳ ಆಶೀರ್ವಾದಿಂದ ಪಂ. ಮಲ್ಲಿಕಾರ್ಜುನ್​ ಮನ್ಸೂರ್​ ಪ್ರಶಸ್ತಿ ಲಭಿಸಿದೆ. > ಪಂ. ವೆಂಕಟೇಶ ಕುಮಾರ್​, ಖ್ಯಾತ ಗಾಯಕ

ಏಕಮಾತ್ರ ಕೇಳುಗನಾಗುವ ಅವಕಾಶ ನನ್ನದಾಗಿತ್ತು!

ಬಾಲ್ಯದಲ್ಲಿ ಮಲ್ಲಿಕಾರ್ಜುನ ಮನ್ಸೂರ್​ ಅವರ ಬಳಿ ಹೋಗಿದ್ದೆ. 'ಏನ್​ ಬಂದ್ರಿ' ಎಂದು ಕೇಳಿದರು. ಒಂದು ಹಾಡು ಹಾಡುತ್ತೀರಾ ಸಾರ್​ ಎನ್ನುತ್ತಾ ಉದ್ಧಟತನ ಮೆರೆದಿದ್ದೆ. ತಕ್ಷಣ ತಪ್ಪು ಮಾಡಿ ಬಿಟ್ಟೆ ಎಂಬುದು ಗೊತ್ತಾಯಿತು. ಕ್ಷಮಿಸಿ ಎಂದು ಬಿಟ್ಟೆ. ನಿನೇನು ತಪ್ಪು ಕೇಳಿಲ್ಲ, ನನಗೆ ಬರುವುದು ಹಾಡುವುದೊಂದೇ, ಹಾಡುತ್ತೀನಿ ಬರ್ರೀ ಎಂದರು. ಯಾವುದು ಹಾಡಲಿ ಎಂದು ಕೇಳಿದರು. 'ಅಕ್ಕ ಕೇಳವ್ವ...' ಹಾಡುತ್ತೀರಾ ಎಂದೆ. ಅದಕ್ಕೇನಂತೆ ಬನ್ನಿ ಎನ್ನುತ್ತಾ ತನ್ಮಯತೆಯಿಂದ ಹಾಡಲು ಆರಂಭಿಸಿದರು. ಕೊನೆಗೆ ತೃಪ್ತಿ ಆತಲ್ಲೋ ಎಂದರು. ಆಯಿತು ಎನ್ನುತ್ತಿದ್ದಂತೆ, ನನಗೆ ಆಗಿಲ್ಲ ಎನ್ನುತ್ತ ಮತ್ತೊಂದು ಹಾಡು ಹಾಡಲು ಆರಂಭಿಸಿದರು. 'ಅಂದು ಅದ್ಭುತ ಸಂಗೀತಗಾರನ ಕಚೇರಿಗೆ ಏಕಮಾತ್ರ ಕೇಳುಗನಾಗುವ ಅವಕಾಶ ನನ್ನದಾಗಿತ್ತು. ಕೊನೆಗೆ ಇಂತಹ ಶ್ರೇಷ್ಠರಲ್ಲಿ ಹಾಡಿಸಿ ಬಿಟ್ಟೆನಲ್ಲಾ ಎಂದು ಕಣ್ಣಲ್ಲಿ ನೀರು ಬಂದಿತ್ತು ಎಂದು ಗುರುರಾಜ ಕರ್ಜಗಿ ನೆನಪಿಸಿಕೊಂಡರು.