ಸರಗೂರು: ಸರಳ, ಸಜ್ಜನಿಕೆಯ ಆರ್.ಧ್ರುವನಾರಾಯಣ ಅವರ ಹತ್ತಿರ ಯಾರೇ ವ್ಯಕ್ತಿ ಬರಲಿ ಅವರಿಗೆ ಸ್ಪಂದಿಸುತ್ತಿದ್ದರು. ಬೆಳಗ್ಗೆಯಿಂದ ರಾತ್ರಿ 11 ಗಂಟೆಯ ತನಕ ಕ್ಷೇತ್ರದ ಅಭಿವೃದ್ಧಿ, ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಪಟ್ಟಣ ಪಂಚಾಯಿತಿ ಮುಂಭಾಗ ಬುಧವಾರ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಆರ್. ಧ್ರುವನಾರಾಯಣ ಅವರ 63ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನನ್ನ ರಾಜಕೀಯ ಗುರು ಧ್ರುವನಾರಾಯಣ ಅವರ ಮಾರ್ಗವನ್ನು ಅನುಸರಿಸಿಕೊಂಡು ಎರಡು ತಾಲೂಕಿನ ಅಭಿವೃದ್ಧಿಗಾಗಿ. ನನ್ನ ಶಕ್ತಿ ಮೀರಿ ಹಗಲಿರುಳು ದುಡಿಯುತ್ತೇನೆ. ಧ್ರುವನಾರಾಯಣ ಅವರು ವಿಶೇಷವಾಗಿ ಕೋಟೆ ತಾಲೂಕಿನ ಮೇಲೆ ಪ್ರೀತಿಯನ್ನು ಇಟ್ಟಿದ್ದರು. ಅವರನ್ನು ಕಳೆದುಕೊಂಡು ನಮಗೆ ಬಹಳ ನೋವಾಗಿದೆ ಎಂದರು.
ಆರ್. ಧ್ರುವನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ ಮಾತನಾಡಿ, ಧ್ರುವನಾರಾಯಣ ಅವರನ್ನು ಕಳೆದುಕೊಂಡು ತಾಲೂಕಿನ ಜನತೆ ತಬ್ಬಲಿಯಾಗಿದೆ. ಅವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ತಿಳಿದು ಮುಂದೆ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಾಜಿ ಜಿ.ಪಂ. ಸದಸ್ಯರಾದ ನರಸೀಪುರ ರವಿ, ಚಿಕ್ಕವೀರನಾಯಕ, ಟೌನ್ ಅಧ್ಯಕ್ಷ ನಾಗರಾಜು, ಕಸಾಪ ತಾಲೂಕು ಅಧ್ಯಕ್ಷ ಕೇಂಡಗಣ್ಣಸ್ವಾಮಿ, ಪ.ಪಂ. ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ , ಗ್ರಾಪಂ ಸದಸ್ಯರಾದ ಬೆಟ್ಟಸ್ವಾಮಿ, ಚಿನ್ನಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ದರಾಜು, ದರ್ಖಾಸ್ ಕಮಿಟಿ ಸದಸ್ಯ ಶಿವಶಂಕರ್, ಕುಂದೂರು ಮೂರ್ತಿ, ಶಂಬುಲಿಂಗನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ, ಚೆಲುವರಾಜು ಗುರುಸ್ವಾಮಿ , ಹಾದನೂರು ಪುಟ್ಟಸ್ವಾಮಿ, ರಾಜೇಶ್, ನಾಗರಾಜು, ಶಿವಾಚೆನ್ನಪ್ಪ, ಮಣಿ, ಸುಭಾನ್, ಸೂರ್ಯ, ನವೀನ್, ದಯಾ, ದೇವು, ಮಾದು, ನಾಗಯ್ಯ, ಬಿಲ್ಲಯ್ಯ, ಯೋಗೇಶ್, ಚಿನ್ನಪ್ಪ, ಜಯಕುಮಾರ್, ರುದ್ರಯ್ಯ ಮೊದಲಾದವರು ಭಾಗವಹಿಸಿದ್ದರು.