ಮೈಸೂರು: ಅಪಘಾತಕ್ಕೊಳಗಾಗಿ ಗುಂಡ್ಲುಪೇಟೆಯಿಂದ ನಗರದ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಸೂಕ್ತ ಚಿಕಿತ್ಸೆ ದೊರೆಯದೆ ಸಂಕಷ್ಟ ಅನುಭವಿಸುತ್ತಿರುವುದನ್ನು ಗಮನಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ವೈದ್ಯಾಧಿ ಕಾರಿಗಳಿಗೆ ನಿರ್ದೇಶನ ನೀಡಿ ಚಿಕಿತ್ಸೆ ಕೊಡಿಸಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ನಿವಾಸಿಯಾದ ಸಿದ್ದಪ್ಪ ಎಂಬುವರು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ಕೆ.ಆರ್. ಆಸ್ಪತ್ರೆಗೆ ಆಗಮಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಸಿದ್ದಪ್ಪ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿತ್ತು. ಆದರೆ, ನೋವು ತಡೆಯಲು ಸಾಧ್ಯವಾಗದೆ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಿದ್ದಪ್ಪ ಒದ್ದಾಡುತ್ತಿದ್ದರು.
ಸಿದ್ದಪ್ಪ ಅವರ ನರಳಾಟವನ್ನು ಗಮನಿಸಿದ ಮಾಧ್ಯಮ ಪ್ರತಿನಿಧಿಗಳು, ಸ್ಥಳದಲ್ಲಿದ್ದ ಡಿಎಚ್‌ಒ ಡಾ.ವೆಂಕಟೇಶ್ ಅವರ ಗಮನ ಸೆಳೆದರು. ತಕ್ಷಣ ಅವರು ಕೆ.ಆರ್ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ರೋಗಿಯನ್ನು ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಸ್ಥಳಕ್ಕೆ ಆಂಬುಲೆನ್ಸ್ ಕರೆಯಿಸಿ ಸಿದ್ದಪ್ಪ ಅವರನ್ನು ಮತ್ತೆ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.