ಜಿಲ್ಲೆ

'ಧೀಮಂತ ಧುರೀಣ', 'ಕರುನಾಡ ಭಗೀರಥರು' ಬಿಡುಗಡೆ

ಬೆಂಗಳೂರು: ನೀರಾವರಿ ತಜ್ಞರಾಗಿದ್ದ ಎಚ್​.ಎನ್​.ನಂಜೇಗೌಡರು, ಆಯಾ ಕಾಲಟ್ಟಗಳಲ್ಲಿ ಸರ್ಕಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಈ ಮೂಲಕ ನೀರಾವರಿ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಂಡಿದ್ದಾರೆ ಎಂದು ಶಾಸಕ, ರಾಜ್ಯ ಒಕ್ಕಲಿಗರ ಸಂದ ಅಧ್ಯಕ್ಷ ಸಿ.ಎನ್​. ಬಾಲಕೃಷ್ಣ ಹೇಳಿದ್ದಾರೆ.

ಎಚ್​.ಎನ್​. ನಂಜೇಗೌಡರ ಅಭಿಮಾನಿಗಳ ಬಳಗ ಹಾಗೂ ಹನ್ಯಾಳು ಪ್ರಕಾಶನ ಪ್ರಕಟಿಸಿರುವ ಎಚ್​.ಎಸ್​. ಗೋವಿಂದ ಗೌಡ ಸಂಪಾದಕತ್ವದ 'ಧೀಮಂತ ಧುರೀಣ ಎಚ್​.ಎನ್​. ನಂಜೇಗೌಡರು' ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರಿನ ಸಮರ್ಪಕ ಬಳಕೆಯಲ್ಲಿ ನಾವು ಇಂದು ಎಡವುತ್ತಿದ್ದೇವೆ. 12 ಸಾವಿರ ಕೋಟಿ ರೂ.ಗಳಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆಯ ವೆಚ್ಚ, ಇಂದು 26 ಸಾವಿರ ಕೋಟಿ ರೂ.ಗೆ ತಲುಪಿದೆ. ಅಲ್ಲದೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಸುಮಾರು 2 ಲಕ್ಷ ಕೋಟಿ ರೂ. ಬೇಕಾದಂತಹ ಸನ್ನಿವೇಶವಿದೆ. ಮುಂದಾಲೋಚನೆಯ ಕೊರತೆಯಿಂದ ಹಲವು ಯೋಜನೆಗಳು ಅಪೂರ್ಣವಾಗಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಮನ್ವಯ ಕೊರತೆಯಿಂದಾಗಿ ರಾಜ್ಯ ರಾಜ್ಯಗಳ ನಡುವೆ ನಡೆಯಬೇಕಿರುವ ಹಲವು ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎಂದು ವಿಷಾದಿಸಿದರು.

ಅಧಿಕಾರಕ್ಕಾಗಿ ಲಾಬಿ ಮಾಡಲಿಲ್ಲ

ನಂಜೇಗೌಡರ ಧೈರ್ಯ ಹಾಗೂ ಕೆಲಸದ ಬಗೆಗಿನ ಬದ್ಧತೆ ಇಂದಿನ ತಲೆಮಾರಿಗೆ ಮಾದರಿಯಾಗಿದೆ. ಕೌಟುಂಬಿಕವಾಗಿ ಸಾಮಾನ್ಯ ಜೀವನ ನಡೆಸಿದ್ದರು. ಮೂರು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿದ್ದರು. ಒಂದೆರಡು ಬಾರಿ ಸೋಲುಂಟಾದಾಗಲೂ ಅಧಿಕಾರಕ್ಕಾಗಿ ಲಾಬಿ ಮಾಡಿದವರಲ್ಲ. ಬದ್ಧತೆಯಿಂದ ಆದರ್ಶ ರಾಜಕಾರಣಿಯಾಗಿ ಬದುಕಿದರು ಎಂದು ಶಾಸಕ ಎ. ಮಂಜು ಸ್ಮರಿಸಿದರು.

ಇದೇ ವೇಳೆ ನೀರಾವರಿ ಕ್ಷೇತ್ರಕ್ಕೆ 'ಕರುನಾಡ ಭಗೀರಥರು' ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ ರಾಮಚಂದ್ರ ಗೌಡ, ಅಶ್ವತ್ಥನಾರಾಯಣ್​, ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್​, ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಕೆ.ನಾರಾಯಣ ಗೌಡ, ನಂಜೇಗೌಡರ ಕುಟುಂಬಸ್ಥರು ಉಪಸ್ಥಿತರಿದ್ದರು.

ನಂಜೇಗೌಡರು ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತನಾಡುತ್ತಿದ್ದರು. ಇದೇ ಮಾದರಿಯಲ್ಲಿ ಇಂದಿನ ರಾಜಕಾರಣಿಗಳು ಧ್ವನಿ ಎತ್ತಬೇಕು. ಆಗ ಮಾತ್ರ ರಾಜಕಾರಣ ಸುಧಾರಣೆಯಾಗಲು ಸಾಧ್ಯ. ಬಾಯಿ ಮುಚ್ಚಿಕೊಂಡು ಕುಳಿತರೆ ರಾಜಕಾರಣ ಇನ್ನಷ್ಟು ತಳಮಟ್ಟಕ್ಕೆ ಹೋಗುತ್ತದೆ.

-ಡಿ.ಆರ್​. ಪಾಟೀಲ್​, ಮಾಜಿ ಶಾಸಕ