1) ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ನಡೆದ 37ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಎಂಎಲ್ಸಿ ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಮಕ್ಬುಲ್ ಬಾಗವಾನ್, ವಿಠ್ಠಲ ಕಟಕಧೋಂಡ, ಅಬ್ದುಲ್ ಹಮೀದ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ ಇತರರಿದ್ದರು. 2) ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ನಡೆದ 37ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಗೋಷ್ಠಿಯಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪತ್ರಕರ್ತರು. 
ಜಿಲ್ಲೆ

ಮಾಧ್ಯಮ ಮರೆಯದ ಧೀಮಂತ ಹಳಕಟ್ಟಿ | ಶಾಸಕ ಎಂ.ಬಿ. ಪಾಟೀಲ ಅಭಿಮತ

ವಿಜಯವಾಣಿ ಸುದ್ದಿಜಾಲ ವಿಜಯಪುರ: ವಚನಗಳ ಪಿತಾಮಹ ಡಾ. ಫ.ಗು. ಹಳಕಟ್ಟಿ ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ನಡೆದ 37ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಿಕೆ ನಡೆಸಲು ಹಳಕಟ್ಟಿ ಅವರು ಮನೆಯನ್ನೂ ಮಾರಿದ್ದರು. ಅವರ ಬದ್ಧತೆಯನ್ನು ಇಂದಿನ ಪತ್ರಕರ್ತರು ಅಳವಡಿಸಿಕೊಳ್ಳಬೇಕು. ಫ.ಗು. ಹಳಕಟ್ಟಿ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ಬಸವಾದಿ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಹಾಗೆಯೇ ಅವರೊಬ್ಬ ಪತ್ರಕರ್ತರೂ ಆಗಿದ್ದರು. 35 ವರ್ಷಗಳ ಕಾಲ ನವಕರ್ನಾಟಕ ವಾರ ಪತ್ರಿಕೆ ಹಾಗೂ ಶಿವಾನುಭವ ಮಾಸ ಪತ್ರಿಕೆಯನ್ನು 25 ವರ್ಷಗಳ ಕಾಲ ಮುನ್ನಡೆಸಿದ್ದರು ಎಂದು ತಿಳಿಸಿದರು.

ಇಂದು ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿವೆ. ಎಲ್ಲ ಕಡೆಗೂ ಒಳ್ಳೆಯವರು ಇದ್ದಂತೆ ಕೆಟ್ಟವರು ಇದ್ದಾರೆ. ಅದು ಪತ್ರಿಕಾರಂಗಕ್ಕೂ ಅನ್ವಯವಾಗುತ್ತದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಜವಾಬ್ದಾರಿ ಅಧಿಕವಾಗಿದೆ. ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಈ ನಾಲ್ಕು ಅಂಗಗಳು ಒಂದಾಗಿ ಕೆಲಸ ಮಾಡಬೇಕಿದೆ. ಸಮಾಜ ತಿದ್ದುವ ಕೆಲಸದಲ್ಲಿ ಪತ್ರಿಕಾ ಕ್ಷೇತ್ರದ ಮಾರ್ಗದರ್ಶನ ಇರಲಿ ಎಂದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸುದ್ದಿಯ ಭರಾಟೆಯಲ್ಲಿ ಪತ್ರಕರ್ತರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು. ಸುದ್ದಿ ರೋಮಾಂಚನಕಾರಿ ಆಗಬಾರದು. ಕೋವಿಡ್ ವೇಳೆ ಸಾವಿನ ಸುದ್ದಿಗಳು ಜನರಲ್ಲಿ ಭೀತಿ ಮೂಡಿಸಿದ್ದವು. ರಾಷ್ಟ್ರದ ಸಮಸ್ಯೆಗಳ ವಿಚಾರದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡರು.
ವೇದಿಕೆಯಲ್ಲಿ ಎಂಎಲ್ಸಿ ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಮಕ್ಬುಲ್ ಬಾಗವಾನ್, ವಿಠ್ಠಲ ಕಟಕಧೋಂಡ, ಅಬ್ದುಲ್ ಹಮೀದ್ ಮುಶ್ರೀಫ್, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ, ಸರ್ವೊತ್ತಮ ಜಾರಕಿಹೊಳಿ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಹಾಗೂ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.