ಜಿಲ್ಲೆ

ದೇವನಹಳ್ಳಿಯಲ್ಲಿ ರೈತರ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ: ಜಿಲ್ಲಾಧಿಕಾರಿಯಿಂದ ಮನವೊಲಿಕೆ ಯಶ

ದೇವನಹಳ್ಳಿ: ಜಿಲ್ಲಾಧಿಕಾರಿ ಭರವಸೆ ಹಾಗೂ ಕಾಲಾವಕಾಶದ ಕೋರಿಕೆ ಹಿನ್ನೆಲೆಯಲ್ಲಿ ರೈತರ ಅಮರಾಣಂತ ಉಪವಾಸ ಬುಧವಾರ ಅಂತ್ಯಕಂಡಿದೆ.

150 ಎಕರೆ ಜಮೀನನ್ನು ಏಕಾಏಕಿ ಕೆಲ ರೈತರ ಪಹಣಿಯಲ್ಲಿ ಸರ್ಕಾರಿ ಜಮೀನು ಎಂದು ನಮೂದು ಮಾಡಿ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ರೈತರು ದೇವನಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಭೂಮಿಕಳೆದುಕೊಳ್ಳುವ ಭೀತಿಯಲ್ಲಿರುವ 133 ರೈತ ಕುಟುಂಬ ರೈತ ಸಂಘಟನೆಗಳ ಜತೆಗೂಡಿ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಜಿಲ್ಲಾಧಿಕಾರಿ ರವೀಂದ್ರ ಬೇಟಿ ನೀಡಿ ಅಹವಾಲು ಸ್ವೀಕರಿಸಿದರು.

ರೈತ ಮುಖಂಡ ಡಿಎಸ್.ಧನಂಜಯ ಮಾತನಾಡಿ, 1969-70 ನೇ ಸಾಲಿನಿಂದ 134 ಸರ್ವೇ ನಂ. ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿರುವ ನಮಗೆ 1983, 2001, 2005ನೇ ಸಾಲುಗಳಲ್ಲಿ ಮೂರು ಹಂತಗಳಲ್ಲಿ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ತಹಸೀಲ್ದಾರ್ ಸಾಗುವಳಿ ಚೀಟಿ ನೀಡಿದ್ದಾರೆ. ಸಾಗುವಳಿ ಚೀಟಿಗಳ ಆಧಾರದ ಮೇಲೆ ರೈತರು ಅವರವರ ಹೆಸರಿಗೆ ಪಹಣಿ, ಮ್ಯುಟೇಷನ್, ಖಾತೆ ಮಾಡಿಸಿಕೊಂಡು ಅಂದಿನಿಂದ ಕಂದಾಯ ಪಾವತಿಸುತ್ತಾ ಬಂದಿದ್ದಾರೆ. ಆದರೂ ರೈತರ ಜಮೀನನ್ನು ಕಬಳಿಸುವ ಹುನ್ನಾರ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ, 1 ತಿಂಗಳು ಕಾಲಾವಕಾಶ ಕೊಡಿ ಕೆಲವರ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಆ ಬಗ್ಗೆಯೂ ನಿಮ್ಮ ಬಳಿ ಇರುವ ಸೂಕ್ತ ದಾಖಲೆ ಪರಿಶೀಲಿಸಿ ಈ ಬಗ್ಗೆ ಕಂದಾಯ ಆಧಿಕಾರಿಗಳು ಹಾಗೂ ತಹಸೀಲ್ದಾರ್ ಜತೆ ಪರಿಶೀಲಿಸಿ ಜ.17 ರಂದು ಸಭೆ ಕರೆದು ಮತ್ತಷ್ಟು ವಿವರ ಪಡೆಯಲಾಗುವುದು ಎಂದರು. ಅಲ್ಲಿಯವರೆಗೂ ಯಾರೂ ದುಡುಕಬೇಡಿ ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಮನವೊಲಿಸಿದರು.