ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಗಮ ಸಂಗೀತ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಉತ್ತರ ಕರ್ನಾಟಕ. ಧಾರವಾಡದ ಮಣ್ಣಿನಲ್ಲೇ ಸಂಗೀತ ಅಡಗಿದ್ದು, ಈ ಕ್ಷೇತ್ರದ ಅನೇಕ ಕಲಾವಿದರು ದೇಶಾದ್ಯಂತ ಹೆಸರಾಗಿರುವುದು ಹೆಮ್ಮೆಯ ಸಂಗತಿ ಎಂದು ಆಕಾಶವಾಣಿ ನಿವೃತ್ತ ಉದ್ಘೋಷಕ ಡಾ. ಶಶಿಧರ ನರೇಂದ್ರ ಹೇಳಿದರು.
ಕರ್ನಾಟಕ ಕಲಾಶ್ರೀ ಡಾ. ಸುಲಭಾ ದತ್ತ ನೀರಲಗಿ ಪುಣ್ಯಸ್ಮರಣೆ ನಿಮಿತ್ತ ನಗರದ ರಜತಗಿರಿಯ ಕಲಾಶ್ರೀ ಸಂಗೀತ ಸಭಾದಲ್ಲಿ ಸೋಮವಾರ ಏರ್ಪಡಿಸಿದ್ದ "ಡಾ. ಸುಲಭಾ ದತ್ತ ನೀರಲಗಿ ಸ್ಮರಣ ಪ್ರಶಸ್ತಿ ಪ್ರದಾನ-2024' ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತದಿಂದಲೇ ಧಾರವಾಡದ ಸಂಸ್ಕೃತಿ ಬೆಳೆದಿದೆ. ಕಲಾ ಪರಂಪರೆಗೆ ಧಾರವಾಡದ ಸಾಹಿತಿಗಳು, ಸಂಗೀತಗಾರರ ಕೊಡುಗೆ ಅಪಾರ. ಅಂತಹವರಲ್ಲಿ ಸುಲಭಾ ದತ್ತ ನೀರಲಗಿ ಸಹ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಹಸಿವಿದ್ದ ವ್ಯಕ್ತಿ ಸಾಧನೆ ಮಾಡಬಲ್ಲ ಎಂಬುದನ್ನು ಸುಲಭಾ ಸಾಬೀತು ಮಾಡಿದ್ದಾರೆ ಎಂದರು.
ಸಂಗೀತದಲ್ಲಿ ಅದ್ಭುತ ಶಕ್ತಿ ಅಡಗಿದೆ. ಸಂಗೀತ ಕಲೆ ಒಲಿಯಲು ಸಾಕಷ್ಟು ಪರಿಶ್ರಮ, ಕಠಿಣ ಅಭ್ಯಾಸ ಅಗತ್ಯ. ಇಂತಹ ಕಠಿಣ ಶ್ರಮದ ಮೂಲಕ ಸುಲಭಾ ಸಾಧನೆ ಮಾಡಿದ್ದರು. ಗಂಗೂಬಾಯಿ ಹಾನಗಲ್ ಶಿಷ್ಯೆಯಾಗಿದ್ದ ಅವರು ಅದ್ಭುತ ಗಾಯಕರಾಗಿದ್ದರು. ಅನೇಕ ಶಿಷ್ಯರಿಗೆ ಸಹ ಪಾಠ ಮಾಡಿ ಅವರಿಗೂ ಸಾಧನೆಯ ದಾರಿ ತೋರಿದ್ದಾರೆ ಎಂದರು.
ಭಾರತಿದೇವಿ ರಾಜಗುರು, ಡಾ. ಶೈಲಶ್ರೀ ಹರಿದಾಸ, ಆನಂದ ಹರಿದಾಸ ಅತಿಥಿಗಳಾಗಿ ಆಗಮಿಸಿದ್ದರು. ಪಂ. ಎಂ. ವೆಂಕಟೇಶಕುಮಾರ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರಾ ಡಾ. ಶಾಂತಾರಾಮ ಹೆಗಡೆ, ಡಾ. ಅಶೋಕ ಹುಗ್ಗಣ್ಣವರ, ಪಂ. ಶ್ರೀಕಾಂತ ಕುಲಕರ್ಣಿ, ವಿದುಷಿ ಸುಜಾತಾ ಗುರವ, ವಿದುಷಿ ವೈಷ್ಣವಿ ಹಾನಗಲ್, ಡಾ. ಶ್ರೀಧರ ಹಾಗೂ ಶೃತಿ ಕುಲಕರ್ಣಿ ದಂಪತಿ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಬಿ.ಎಂ. ಕೇದಾರನಾಥ, ಪಂ. ಸಂಜೀವ ಪೊತದಾರ, ಡಾ. ರಾಚಯ್ಯ ಹಿರೇಮಠ, ಪಂ. ಅಲ್ಲಮಪ್ರಭು ಕಡಕೋಳ ಅವರಿಗೆ ಡಾ. ಸುಲಭಾ ದತ್ತ ನೀರಲಗಿ ಸ್ಮರಣ ಪ್ರಶಸ್ತಿ-2024 ನೀಡಿ ಗೌರವಿಸಲಾಯಿತು.
ವಿಶಾಲ ನೀರಲಗಿ, ಎಸ್.ಬಿ. ಗುತ್ತಲ, ನೀರಲಗಿ, ಡಂಬಳ, ನಾಡಿಗೇರ ಹಾಗೂ ದೇಶಪಾಂಡೆ ಕುಟುಂಬಸ್ಥರು, ಸುಲಭಾ ದತ್ತ ನೀರಲಗಿ ಅಭಿಮಾನಿಗಳು, ಇತರರು ಇದ್ದರು.
ಡಾ. ದತ್ತ ನೀರಲಗಿ ಸ್ವಾಗತಿಸಿದರು.