ಜಿಲ್ಲೆ

ಆಡಳಿತದಲ್ಲಿ ಕನ್ನಡ ಅಗ್ರಸ್ಥಾನದಲ್ಲಿರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆ. ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡವೇ ಅಗ್ರಸ್ಥಾನದಲ್ಲಿರಬೇಕು ಎಂದು ಸರ್ವಾಧ್ಯಕ್ಷ ಡಾ. ನಿತಿನ್‌ಚಂದ್ರ ಹತ್ತಿಕಾಳ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರವಾಡ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಜನತೆಯ ಆಡುಭಾಷೆ ಕೇವಲ ಕಾಗದದ ಮೇಲಿದ್ದರೆ ಸಾಲದು. ಪ್ರತಿಯೊಬ್ಬ ಪ್ರಜೆಯು ಕನ್ನಡ ಭಾಷೆ ಓದಬೇಕು, ಮಾತನಾಡಬೇಕು ಮತ್ತು ಬರೆಯಬೇಕು. ಅಂದಾಗ ಭಾಷೆ ಬೆಳೆಯಲು ಸಾಧ್ಯ. ಪ್ರತಿಯೊಬ್ಬರೂ ಕನ್ನಡ ಬಳಸುವ ಪ್ರತಿಜ್ಞೆ ಮಾಡಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ದೊರೆಯುವಂತಾಗಬೇಕು. ಇದಕ್ಕಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆಡಳಿತ ನಡೆಸುವ ಸರ್ಕಾರಗಳು ಮನಸ್ಸು ಮಾಡಿದರೆ ಸಂಪೂರ್ಣ ಕನ್ನಡ ಬಳಕೆ ಮತ್ತು ಅನುಷ್ಠಾನ ಸಾಧ್ಯವಾಗಲಿದೆ. ಕಲಿಕಾ ವ್ಯವಸ್ಥೆಯ ಬಗ್ಗೆ ಅಪಸ್ವರ ಎತ್ತುವುದಕ್ಕಿಂತ ಕನ್ನಡ ಶಾಲೆಗಳಲ್ಲಿ ಎಷ್ಟು ಗಟ್ಟಿ ಯಾಗಿ ಕನ್ನಡ ಕಲಿಸುತ್ತಿದ್ದೇವೆ ಎಂಬುದನ್ನು ಸರಿಯಾಗಿ ಆಲೋಚಿಸಬೇಕು. ಸರ್ಕಾರ ಪ್ರತಿವರ್ಷ ಕನ್ನಡ ಮಾಧ್ಯಮ ಶಾಲೆಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇದರ ಬಗ್ಗೆ ಹೆಮ್ಮೆ ಇದೆ. ಆದರೆ, ಕಾಲಕ್ಕೆ ಬೇಕಾದ ಕನ್ನಡ ಮಾಧ್ಯಮ ಶಾಲೆಯನ್ನು ಕಟ್ಟುತ್ತಿಲ್ಲ ಎಂಬುದು ಬೇಸರದ ಸಂಗತಿ. ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಕಟ್ಟುವ ಕೆಲಸವಾಗಬೇಕು ಎಂದರು.