ವಿಕ್ರಮ ನಾಡಿಗೇರ ಧಾರವಾಡ
ಭಾರತೀಯ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರಲ್ಲಿ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದೂ ಒಂದು. ಈ ಯೋಜನೆಯಡಿ ಕೆಲ ವರ್ಷಗಳ ಹಿಂದಷ್ಟೇ ನವೀಕರಣಗೊಂಡು ಉದ್ಘಾಟನೆಯಾದ ರೈಲು ನಿಲ್ದಾಣದ ಮೇಲ್ಛಾವಣಿ ಪಿಒಪಿ ಕಳಚುತ್ತಿವೆ. ಇದು ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಮೃತ ಭಾರತ ನಿಲ್ದಾಣಗಳ ಯೋಜನೆ ಅಡಿ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ರೈಲು ನಿಲ್ದಾಣ ಮೇಲ್ದರ್ಜೆಗೇ ರಿಸಲಾಗಿದೆ. ನವೀಕರಣಗೊಂಡ ಸುಸಜ್ಜಿತ ನಿಲ್ದಾಣವನ್ನು 2022ರ ಅಕ್ಟೋಬರ್ 11ರಂದು ರೈಲ್ವೆ ಸಚಿವರು ಉದ್ಘಾಟಿಸಿದ್ದರು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವೇಟಿಂಗ್ ರೂಂ, ಫುಡ್ ಪ್ಲಾಜಾ, ಧಾರವಾಡ ಇತಿಹಾಸ ತಿಳಿಸುವ ಚಿತ್ರಕಲೆ, ಹೀಗೆ ಅನೇಕ ಸೌಲಭ್ಯ ನೀಡಿದ್ದು ಪ್ರಯಾಣಿಕರಿಗೆ ಖುಷಿಯಾಗಿತ್ತು. ಆದರೆ, 2 ವರ್ಷದಲ್ಲಿ ಕಾಮಗಾರಿ ಬಣ್ಣ ಬಯಲಾಗಿದ್ದು, ರೈಲ್ವೆ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.
ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಸೇರಿ 2-3 ಕಡೆಗಳಲ್ಲಿ ಮೇಲ್ಛಾವಣಿ ಬಿರುಕು ಬಿಟ್ಟಿದೆ ಹಾಗೂ ಪಿಒಪಿ ಕಳಚಿ ಬಿದ್ದಿದೆ. ಇದರಿಂದ ಮೇಲ್ಛಾವಣಿ ಸೋರುತ್ತಿದೆ. ಪ್ಲಾಟ್ ಫಾಮ್ರ್ 1ರಲ್ಲಿಯೂ ಕೆಲ ಕಡೆಗಳಲ್ಲಿ ಮೇಲ್ಛಾವಣಿ ಬಿರುಕು ಬಿಟ್ಟು ಸೋರಲಾರಂಭಿಸಿದೆ. ಇಡೀ ಆವರಣದಲ್ಲಿ ನೀರು ಹರಿಯುವುದಲ್ಲದೆ, ಜನರು ಕುಳಿತುಕೊಳ್ಳುವ ಕಟ್ಟೆಗಳು ತಂಪು ಹಿಡಿಯುತ್ತಿವೆ.
ಇದರಿಂದ ಟಿಕೆಟ್ ಪಡೆಯುವ ಹಾಗೂ ರೈಲಿಗಾಗಿ ಕಾದುಕುಳಿತುಕೊಳ್ಳುವ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಮೇಲ್ಛಾವಣಿಯಿಂದ ಸೋರಿಕೆಯಾದ ನೀರು ಆವರಣದಲ್ಲಿ ಬೀಳುತ್ತಿರುವುದರಿಂದ ಪ್ರಯಾಣಿಕರು ಜಾರಿ ಬೀಳುವ ಭಯದಲ್ಲೇ ಓಡಾಡುವಂತಾಗಿದೆ. ಒಮ್ಮೆ ಧಾರಾಕಾರ ಮಳೆ ಸುರಿದರೆ ಸಾಕು ಇಡೀ ಆವರಣದ ಅಂದವೇ ಕೆಡುವಂತಾಗಿದೆ.
ಈ ಹಿಂದೆ ಇದ್ದ ಕಟ್ಟಡ ಸಾಕಷ್ಟು ಗಟ್ಟಿಯಾಗಿಯೇ ಇತ್ತು. ಎಂತಹದ್ದೇ ಮಳೆ ಬಂದರೂ ಸೋರಿದ ಪ್ರಸಂಗ ನಡೆದಿರಲಿಲ್ಲ. ಆದರೆ, ಈಗಿನ ಕಟ್ಟಡ 2 ವರ್ಷದಲ್ಲೇ ಸೋರುತ್ತಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ನಿಲ್ದಾಣಗಳ ಅಭಿವೃದ್ಧಿಯಾಗಬೇಕು ಎಂಬುದು ಸರಿ. ಆದರೆ, ಅಭಿವೃದ್ಧಿಗೆ ವ್ಯಯಿಸುವ ಕೋಟ್ಯಂತರ ರೂ. ಅನುದಾನವೂ ಸದ್ಬಳಕೆಯಾಗಬೇಕು ಹಾಗೂ ಆಗುವಂತೆ ಗಮನ ಹರಿಸುವುದೂ ಮುಖ್ಯವಾಗಿದೆ ಎಂಬುದು ಪ್ರಯಾಣಿಕರ ಮಾತಾಗಿದೆ.
ಹೊಸ ನಿಲ್ದಾಣ ಸೋರುತ್ತಿರುವುದನ್ನು ಕಂಡರೆ ಕೋಟಿಗಟ್ಟಲೆ ಹಣ ಹಾಕಿ ಅಭಿವೃದ್ಧಿ ಮಾಡಿದ್ದು ಏನು? ಎಂಬ ಪ್ರಶ್ನೆ ಉದ್ಭವಿಸಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಓಡಾಡುವುದು ಸಹ ಕಷ್ಟವಾಗಿದೆ. ಅಧಿಕಾರಿಗಳು ಕೂಡಲೇ ಕಳಪೆ ಕಾಮಗಾರಿ ಬಗ್ಗೆ ಗಮನ ಹರಿಸಿ ದುರಸ್ತಿಗೆ ಕ್ರಮ ವಹಿಸಬೇಕು. ರವಿ ಎಂ.ಜೆ., ಪ್ರಯಾಣಿಕ, ಧಾರವಾಡ
ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಎರಡೇ ವರ್ಷದಲ್ಲಿ ಸೋರುತ್ತಿರುವುದು ಬೇಸರದ ಸಂಗತಿ. ಕಾಮಗಾರಿ ಗುಣಮಟ್ಟದ್ದಾಗಿರಬೇಕಿತ್ತು. ಮೇಲಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೂಡಲೇ ದುರಸ್ತಿ ಕಾರ್ಯ ನಡೆಸಬೇಕು. ಇದಲ್ಲದೆ ತತ್ಕಾಲ್ ಟಿಕೆಟ್ ಪಡೆಯಲು ಬರುವವರಿಗೆ ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಆಸನಗಳ ವ್ಯವಸ್ಥೆ ಸಹ ಇಲ್ಲ. ಆಸನ ವ್ಯವಸ್ಥೆ ಮಾಡುವಂತೆ ಮನವಿ ಸಹ ಮಾಡಿದ್ದೇವೆ. ಪಿ.ಜಿ. ನರಸಾಪುರ, ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ