ಹುಬ್ಬಳ್ಳಿ: ಧಾರವಾಡ ನೆಹರು ನಗರದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಇದರಲ್ಲಿ ಭಾಗಿಯಾದವರು ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸೂಚನೆ ನೀಡಿದರು.
ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಂದನಗರ ಕೃಷ್ಣ ಕಾಲನಿ, ನವನಗರ ನಂದೀಶ್ವರನಗರ ಮತ್ತು ಧಾರವಾಡದ ಚಂದ್ರಕಾಂತ ಬೆಲ್ಲದ ನಗರದಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ ಬಳಿಕ ಜನರ ದೂರು ಸ್ವೀಕರಿಸಿ ಅವರು ಮಾತನಾಡಿದರು.
ಬಡವರಿಗೆ ವಂಚನೆ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಕೊಡಿಸಲಾಗುವುದು. ಈ ಹಿಂದೆ ಇದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಧಾರವಾಡ ನೆಹರು ನಗರ ಸ್ಲಮ್ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಅಧಿಕಾರಿಗಳ ನಿರ್ಲಕ್ಷ್ಯ:
ಪಾಲಿಕೆ ಅಧಿಕಾರಿಗಳ ನಿರ್ಲ್ಯಕ್ಷ್ಯ, ಬೇಜವಾಬ್ದಾರಿತನದಿಂದ ಜನರಿಗಷ್ಟೇ ಅಲ್ಲ, ಇತರ ಇಲಾಖೆಗಳಿಗೂ ಸಮಸ್ಯೆ ಎದುರಾಗಿದೆ. ಆದಾಯದ ಮೂಲವೇ ಇಲ್ಲ ಎಂದು ಹೇಳುವ ಅಧಿಕಾರಿಗಳು ಪಾಲಿಕೆ ಸ್ವತ್ತುಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳುವಲ್ಲಿ ವಿಲವಾಗಿದ್ದಾರೆ. ಹಂಚಿಕೆ ಮಾಡಿದ ಜಾಗದಲ್ಲೇ ಆಶ್ರಯ ಮನೆಗಳು ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ. ಇದರಿಂದ ಮುಂಚೆ ಜಾಗ ಪಡೆದವರು ಗೊಂದಲಕ್ಕೀಡಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಕ್ಕೆ ಪಾಲಿಕೆ ಆಯುಕ್ತರ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕರು ಹರಿಹಾಯ್ದರು.
ಈಗಾಗಲೇ ಜಮೀನು ಹಂಚಿಕೆ ಮಾಡಿದ ಫಲಾನುಭವಿಗಳ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣ ಮಾಡಿದ್ದಾರೆ, ಸಂತ್ರಸ್ಥರಿಗೆ ಪರ್ಯಾಯ ಭೂಮಿ ಒದಗಿಸಬೇಕು. ಈ ಕುರಿತು ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚಿಸಲಾಗುವುದು ಎಂದು ಶಾಸಕ ಅಬ್ಬಯ್ಯ ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ ಡಿ.ಆರ್, ಮುಖ್ಯ ಇಂಜಿನಿಯರ್ ಎಚ್.ಪಿ. ಸುಧೀರ್, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಕಾರ್ಯನಿರ್ವಾಹಕ ಅಭಿಯಂತರ ಪ್ರವಿಣ, ಸಹಾಯಕ ನಿರ್ದೇಶಕ ಮಹಾಂತೇಶ ಪಾಟೀಲ, ವಿಶೇಷ ಅಧಿಕಾರಿ ಮುನಿರಾಜ್ ಇತರರು ಇದ್ದರು.