ಜಿಲ್ಲೆ

ಧಾರವಾಡ ಸಂಸದ ಕ್ರೀಡಾ ಮಹೋತ್ಸವ ಜರ್ಸಿ ಬಿಡುಗಡೆ

ಹುಬ್ಬಳ್ಳಿ : ಧಾರವಾಡ ಸಂಸದ ಕ್ರೀಡಾ ಮಹೋತ್ಸವ-2025 ಅನ್ನು ಬರುವ ನವೆಂಬರ್, ಡಿಸೆಂಬರ್ ಹಾಗೂ ಜನವರಿ-2026ರಂದು ಧಾರವಾಡ ಲೋಕಸಭೆ ಕ್ಷೇತ್ರದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರತಿಯೊಬ್ಬರೂ ಸದೃಢವಾಗಿದ್ದರೆ, ದೇಶವೂ ಸದೃಢವಾಗಿರುತ್ತದೆ. ಆದಕಾರಣ, ಪ್ರತಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಸದ ಕ್ರೀಡಾ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದರು.

ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕಬಡ್ಡಿ, ಖೋಖೋ, ಹಗ್ಗಜಗ್ಗಾಟ, ವಾಲಿಬಾಲ್, ಕ್ರಿಕೆಟ್, ಲಗೋರಿ, ಚಿನ್ನಿದಾಂಡ, ಗೋಲಿ ಆಟ, ಯೋಗ, ಮಲ್ಲಕಂಬ, 100 ಮೀ. ಹಾಗೂ 200 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು ಸೆ. 20ರೊಳಗೆ ಹೆಸರು ನೋಂದಣಿ ಮಾಡಬೇಕು ಎಂದು ತಿಳಿಸಿದರು.

ಕ್ರೀಡೆಗಳು ವಿವಿಧ ಹಂತಗಳಲ್ಲಿ ನಡೆಯಲಿವೆ. ಗ್ರಾಮ, ವಾರ್ಡ್, ವಿಧಾನಸಭೆ ಹಂತಗಳಲ್ಲಿ ಗೆಲುವು ಸಾಧಿಸಿದವರು ಲೋಕಸಭೆ ವ್ಯಾಪ್ತಿಯಲ್ಲಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಆಡಲಿದ್ದಾರೆ ಎಂದು ಹೇಳಿದರು.

ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿವಿಧ ಕ್ರೀಡೆಗಳ ದಿನಾಂಕ ನಿಗದಿಪಡಿಸಲಾಗುವುದು. ಪ್ರಮುಖ ಕ್ರೀಡೆಗಳು ಡಿಸೆಂಬರ್ ಮತ್ತು 2026ರ ಜನವರಿಯಲ್ಲಿ ನಡೆಯಲಿವೆ. 2026ರ ಜನವರಿಯಲ್ಲಿ ಆಯೋಜಿಸುವ ಗಾಳಿಪಟ ಉತ್ಸವದ ಸಂದರ್ಭದಲ್ಲಿಯೇ ಪ್ರಸಕ್ತ ವರ್ಷದ ಸಂಸದ ಕ್ರೀಡಾ ಮಹೋತ್ಸವದ ಸಮಾರೋಪ ಸಮಾರಂಭವೂ ನಡೆಯಲಿದೆ ಎಂದು ತಿಳಿಸಿದರು.

2034ರ ಒಲಿಂಪಿಕ್​ಗೆ ಪ್ರತಿ ಶಿಕ್ಷಣ ಸಂಸ್ಥೆಯಿಂದ ಕನಿಷ್ಠ 3-4 ಕ್ರೀಡಾಪಟುಗಳು ತಯಾರಗಬೇಕು. ಸರ್ಕಾರಿ ಶಾಲೆಗಳಲ್ಲಿಯೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಪ್ರಾಯೋಜಕರನ್ನು ಒದಗಿಸಲು ತಾವು ಸಿದ್ಧ ಇರುವುದಾಗಿ ಹೇಳಿದರು.

ಈಗಾಗಲೇ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ದೊಡ್ಡ ಕ್ರೀಡಾ ಸಂಕೀರ್ಣಗಳು ಸಿದ್ಧಗೊಂಡಿವೆ. ಹುಬ್ಬಳ್ಳಿಯ ಉಣಕಲ್​ನಲ್ಲಿಯೂ ಒಳಾಂಗಣ ಕ್ರೀಡಾಂಗಣ ನಿರ್ವಿುಸುವ ಉದ್ದೇಶ ಇದೆ ಎಂದರು.

ಜರ್ಸಿ ಹಾಗೂ ಕ್ರೀಡಾ ಮಹೋತ್ಸವದ ಟೀಸರ್ ಬಿಡುಗಡೆಗೊಳಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ಮಹಾಪೌರ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಶಿವು ಹಿರೇಮಠ ಹಾಗೂ ಇತರರು ಇದ್ದರು.