ಜಿಲ್ಲೆ

ನೊರೆ ಪೀಡಿತ ಹಳ್ಳಕ್ಕೆ ಸಚಿವರ ಭೇಟಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಧಾರವಾಡ: ನಗರದ ಚಿಕ್ಕಮಲ್ಲಿಗವಾಡ ರಸ್ತೆಯ ಸಾಧುನವರ ಎಸ್ಟೇಟ್ ಬಳಿಯ ಹಳ್ಳದ ನೀರಿನಲ್ಲಿ ನೊರೆ ಬರುತ್ತಿರುವ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವಿಷಯವಾಗಿ ಎರಡು ದಿನಗಳ ಹಿಂದೆ ದಿಗ್ವಿಜಯ 24*7 ಸುದ್ದಿ ವಾಹಿನಿಯಲ್ಲಿ ಸಮಗ್ರ ವರದಿ ಪ್ರಸಾರ ಮಾಡಲಾಗಿತ್ತು. ಇದನ್ನು ಗಮನಿಸಿದ ಸಚಿವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೆಮಿಕಲ್ ನೀರು ಎಲ್ಲಿಂದ ಬರುತ್ತಿದೆ? ಎಂಬುದು ಸೇರಿ ಇತರ ಮಾಹಿತಿಯನ್ನು ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಪಡೆದರು.
ನಂತರ ಮಾತನಾಡಿದ ಸಚಿವರು, ನೀರಿನಲ್ಲಿ ಬರೀ ನೊರೆ ಅಲ್ಲದೆ ಕೆಮಿಕಲ್ ಬರುತ್ತಿದೆ. ಇದಕ್ಕೆ ಕಾರಣ ಏನು? ಎಂಬುದು ತಿಳಿಯಬೇಕಿದೆ. ಸ್ಥಳೀಯರು ಸಮೀಪದ ಕಾರ್ಖಾನೆಯಿಂದ ಬಿಡುವ ರಾಸಾಯನಿಕದಿಂದ ಇದಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದ್ಯಕ್ಕೆ ಆಗಬೇಕಿರುವ ಪರಿಹಾರ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಚಿಂತನೆ ಮಾಡಲಿದ್ದೇವೆ. ರಾಜಕಾಲುವೆ ನಿರ್ಮಿಸಬೇಕೆ? ಅಥವಾ ಇತರ ಮಾರ್ಗದ ಮೂಲಕ ಈ ಸಮಸ್ಯೆಗೆ ಮುಕ್ತಿ ನೀಡಲು ಸಾಧ್ಯವೇ? ಎಂಬುದನ್ನು ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಸಚಿವರು ಆಗಮಿಸುವ ಮುಂಚೆ ಸ್ಥಳಕ್ಕೆ ಆಗಮಿಸಿದ್ದ ಚಿಕ್ಕಮಲ್ಲಿಗವಾಡ ಗ್ರಾಪಂ ಸದಸ್ಯೆ ಪವಿತ್ರಾ ತಳವಾರಗೆ ಸ್ಥಳೀಯರು ತರಾಟೆ ತೆಗೆದುಕೊಂಡರು. ನೊರೆ ಬರುತ್ತಿರುವ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯವೂ ಇಲ್ಲ ಎಂದು ತೀವ್ರ ತರಾಟೆ ತೆಗೆದುಕೊಂಡ ಪರಿಣಾಮ ಸದಸ್ಯೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.