ಧಾರವಾಡ: ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಇಲ್ಲಿನ ಧಾರವಾಡ ಕೃಷಿ ವಿಶ್ವವಿದ್ಯಾಲಯವೂ ಗುರುತಿಸಿಕೊಂಡಿದೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸದಾ ಮುಂದಿರುವ ವಿವಿ, ಪ್ರತಿವರ್ಷ ಆಯೋಜಿಸುವ ಕೃಷಿ ಮೇಳ ಕೂಡ ದೇಶಾದ್ಯಂತ ಹೆಸರುವಾಸಿ. ಈ ಬಾರಿಯ ಕೃಷಿ ಮೇಳವನ್ನು `ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು' ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದೆ.
ಈ ಬಾರಿಯ ಕೃಷಿ ಮೇಳ ಸೆ. ೯ರಿಂದ ೧೨ರವರೆಗೆ ಜರುಗಲಿದ್ದು, ಅದಕ್ಕಾಗಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ೩ ದಿನಗಳ ಮೇಳದಲ್ಲಿ ರೈತರು, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳ ಅವಲಂಬಿತರು, ಕೃಷಿಗೆ ಅಗತ್ಯ ಉಪಕರಣಗಳ ತಯಾರಕ ಕಂಪನಿಗಳ ಪ್ರತಿನಿಽಗಳು ಸೇರಿ ೫ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವುದು ವಿಶೇಷ. ೩ ದಿನಗಳ ಕಾಲ ನಡೆಯುವ ಕೃಷಿ ಮೇಳದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ದೇಶ- ವಿದೇಶಗಳ ಕೃಷಿ ವಿಶ್ವವಿದ್ಯಾಲಯಗಳ ಪ್ರತಿನಿಽಗಳು ಮೆಚ್ಚಿದ್ದಾರೆ.
ಸಾವಯವ ಕೃಷಿಯ ಉತ್ತೇಜನ ಮತ್ತು ಸಿರಿಧಾನ್ಯ ಬೆಳೆಗಳ ಉತ್ಪಾದನೆ ಮತ್ತು ಬಳಕೆ ಇಂದಿನ ಅಗತ್ಯ. ಹೀಗಾಗಿ ಕೃಷಿ ಮೇಳದಲ್ಲಿ ಸಾವಯವ ಕೃಷಿ ಬೆಳೆಗಳು, ಸಿರಿಧಾನ್ಯ ಮಳಿಗೆಗಳು, ಉತ್ಪಾದನೆಯ ಬಗೆ, ಅವುಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕುರಿತ ಮಾಹಿತಿ ಸಿಗಲಿದೆ. ಅಲ್ಲದೆ, ಸಿರಿಧಾನ್ಯ ಮತ್ತು ಸಾವಯವ ಕೃಷಿ ಸಾಧಕರ ಮಳಿಗೆಗಳು ಇರಲಿದ್ದು, ಮಾಹಿತಿ ವಿನಿಮಯಕ್ಕೆ ವೇದಿಕೆ ಸಿಗಲಿದೆ.
ಕೂಲಿ ಕಾರ್ಮಿಕರ ಅಲಭ್ಯತೆ ಕೃಷಿಗೆ ದೊಡ್ಡ ಹೊಡೆತ ಕೊಡುತ್ತಿದೆ. ಜೊತೆಗೆ ಕಳೆ ಮತ್ತು ಕೀಟಬಾಧೆ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೈವಿಕ ಗೊಬ್ಬರದ ಬಳಕೆಯಿಂದಾಗುವ ಪ್ರಯೋಜನ ಹಾಗೂ ಪೀಡೆನಾಶಕಗಳ ಬಗ್ಗೆ ತಜ್ಞರಿಂದ ಮಾಹಿತಿ ಲಭ್ಯವಾಗಲಿದೆ.
ನೈಸರ್ಗಿಕ ಮತ್ತು ಸಾವಯವ ಕೃಷಿ, ಮಣ್ಣಿನ ಫಲವತ್ತತೆ ಕಾಪಾಡುವುದು ಹಾಗೂ ಮಣ್ಣಿನ ಆರೋಗ್ಯ ಸಂರಕ್ಷಣೆ ಇಂದಿನ ಅಗತ್ಯ. ಮತ್ತೊಂದೆಡೆ ಮಳೆಯ ಕೊರತೆಯ ಮಧ್ಯೆಯೂ ಬಿತ್ತನೆ ಮಾಡಿ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರ ನೈಸರ್ಗಿಕವಾಗಿ ದೊರಕುವ ಮಳೆ ನೀರಿನ ಕೊಯ್ಲು ಮತ್ತು ಅಂತರ್ಜಲ ಮರುಪೂರಣ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಮಳೆನೀರನ್ನು ಸಂರಕ್ಷಿಸಿ ಮರುಬಳಕೆಗೆ ಉತ್ತೇಜಿಸುವ ಯತ್ನ ಮೇಳದಲ್ಲಿ ನಡೆಯಲಿದೆ.
ಏಕಬೆಳೆ ಮತ್ತು ಸಾಂಪ್ರದಾಯಿಕ ಬೆಳೆಗಳ ಬದಲು ಬಹುಬೆಳೆ ಪದ್ಧತಿ, ಮನೆ ಬಳಕೆಗೆ ಪೌಷ್ಠಿತ ತೋಟ, ನಗರ ಪ್ರದೇಶಗಳಲ್ಲಿ ತಾರಸಿ ತೋಟ ನಿರ್ವಹಣೆಯ ಬಗ್ಗೆ ಮಾಹಿತಿ ಸಿಗಲಿದೆ. ಅಲ್ಲದೆ, ಕಡಿಮೆ ಸ್ಥಳದಲ್ಲಿ ಹೈಟೆಕ್ ತೋಟಗಾರಿಕೆ ಮಾಡುವ ಮೂಲಕ ಮನೆಯ ಆವರಣದಲ್ಲೇ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯಲು ಅನುಭವಿ ರೈತರು ಮಾರ್ಗದರ್ಶನ ಮಾಡಲಿದ್ದಾರೆ. ಜೊತೆಗೆ ಮಹಿಳೆಯರು, ಯುವತಿಯರನ್ನು ಆಕರ್ಷಿಸಲು ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಜೊತೆಗೆ ಜಾನುವಾರುಗಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಜನಮನ ಸೆಳೆಯಲಿದೆ.
ಅಽಕ ಇಳುವರಿ ಪಡೆಯುವುದು ಪ್ರತಿಯೊಬ್ಬ ರೈತನ ಕನಸು. ಅದಕ್ಕಾಗಿ ಸಮರ್ಪಕ ನೀರಿನ ಬಳಕೆಗಾಗಿ ಸುಧಾರಿತ ನೀರಾವರಿ ಪದ್ಧತಿಗಳು, ಮುಂಗಾರು- ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋನ್ ಬಳಕೆ ಅಗತ್ಯತೆಯ ಬಗ್ಗೆ ಕೃಷಿ ತಜ್ಞರು, ವಿಜ್ಞಾನಿಗಳು ಗೋಷ್ಠಿಗಳಲ್ಲಿ ಮಾಹಿತಿ ನೀಡಲಿದ್ದಾರೆ.
ರೈತರ ಆವಿಷ್ಕಾರಗಳ ಪರಿಚಯ, ವಿಶೇಷ ಸಾಧನೆಗೈದ ರೈತ ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ ಕೃಷಿ ಮೇಳದಲ್ಲಿ ಇರಲಿದೆ. ಕೃಷಿ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಕೃಷಿ ನವೋದ್ಯಮಗಳ ಪರಿಚಯ ಆಗಲಿದೆ. ಕೃಷಿ ಅರಣ್ಯ, ಪಶು ಸಂಗೋಪನೆ ಹಾಗೂ ಮೇವಿನ ಬೆಳೆಗಳ ತಾಂತ್ರಿಕತೆಯ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ಸಿಗಲಿದೆ.