ಜಿಲ್ಲೆ

ಶಿಸ್ತುಬದ್ಧ ಅಧ್ಯಯನದೊಂದಿಗೆ ಭವಿಷ್ಯ ರೂಪಿಸಿಕೊಳ್ಳಿ

ಮಂಜುನಾಥ ಅಂಗಡಿ

ಧಾರವಾಡ: ಶಿಸ್ತುಬದ್ಧ ಮತ್ತು ನಿರಂತರ ಅಧ್ಯಯನದಿಂದ ಒಳ್ಳೆಯ ಅಂಕಗಳನ್ನು ಗಳಿಸಬಹುದು. ವಿಷಯದ ಅರ್ಥಗ್ರಹಿಕೆಯ ಜೊತೆಗೆ ಪದಗಳ ಅರ್ಥವನ್ನು ತಿಳಿದುಕೊಳ್ಳಬೇಕು. ನಿತ್ಯ ೧೫ ಹೊಸ ಪದಗಳ ಅರ್ಥವನ್ನು ಶಬ್ದಕೋಶದ ಸಹಾಯದಿಂದ ತಿಳಿದುಕೊಂಡು ಶಬ್ದ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕೋತ್ತರ ವಿಭಾಗಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಕ್ಷಾಬೋಧ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರತಿಭೆಯನ್ನು ಪ್ರಸ್ತುತಪಡಿಸಲು ಸಾಧ್ಯ. ಈ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿದರೆ ಸಾಧನೆ ಸಾಧ್ಯ. ಕಾಲೇಜಿನಲ್ಲಿರುವ ಸ್ಪರ್ಧಾತ್ಮಕ ಅಧ್ಯಯನ ಗ್ರಂಥಾಲಯದ ಪ್ರಯೋಜನ ಪಡೆದು ಯಶಸ್ಸು ಗಳಿಸಿ ಎಂದರು.
ಡಾ. ಸೂರಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತ ದೇಸಾಯಿ ನಿರೂಪಿಸಿದರು.ಡಾ. ಜ್ಯೋತಿ ಅಕ್ಕಿ ವಂದಿಸಿದರು. ಮಹಾವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು ಇದ್ದರು.