ಜಿಲ್ಲೆ

ಕನ್ನಡಕ್ಕೆ ಅಡಿಪಾಯ ಹಾಕಿದ್ದ ಸ್ಥಳ ಧಾರವಾಡ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡಿಗರು ದೊಡ್ಡ ಉದಾರಿಗಳು. ಕನ್ನಡಕ್ಕಾಗಿ ಅಡಿಪಾಯ ಹಾಕಿದ ಸ್ಥಳವೇ ಧಾರವಾಡ. ಮರಾಠಿಯಲ್ಲಿ ಕಲಿತ್ತಿದ್ದ ಜಯದೇವಿತಾಯಿ ಲಿಗಾಡೆ ಕನ್ನಡದಲ್ಲೇ ಪ್ರಥಮ ಶಾಲೆ ತೆರೆದ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದು ಉಪನ್ಯಾಸಕ ಮೃತ್ಯುಂಜಯ ವಸ್ತ್ರದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸ್ವಾತಂತ್ರೃ ಹೋರಾಟ ಮತ್ತು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ದುಡಿದ ಮಹಿಳೆಯರ ಕೊಡುಗೆ ಅಪಾರವಿದೆ. ಜಯದೇವಿತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ, ಮೀರಾಬಾಯಿ, ಮೇಲುಕೋಟೆ ಸುಹಾಸಿನಿ ಭಂಡಾರಿ, ಆಶಾತಾಯಿ ಅವರಂತಹ ಅನೇಕರು ಇದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಭಾವಿಕಟ್ಟಿ ಮಾತನಾಡಿ, ಮೌಲ್ಯವಿಲ್ಲದ ಶಿಕ್ಷಣಕ್ಕೆ ಅರ್ಥವಿಲ್ಲ. ಮೌಲ್ಯಗಳನ್ನು ಉಳಿಸಿ, ಬೆಳೆಸುವಲ್ಲಿ ಇಂದಿನ ವಿದ್ಯಾರ್ಥಿಗಳು, ತಾಯಿಯನ್ನು ಪ್ರೀತಿಸುವ ಹಾಗೆ ನಾಡು, ನುಡಿ, ಭಾಷೆ, ನೆಲ, ಜಲ ಪ್ರೀತಿಸಬೇಕು. ಇದರ ಜತೆಗೆ ನಾಡು ಕಟ್ಟಿದವರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಹರ್ಲಾಪುರದ ಈಶ್ವರ ಅರಳಿ ಹಾಗೂ ಸಂಗಡಿಗರು ನಾಡು, ನುಡಿಯ ಗಾಯನ ಪ್ರಸ್ತುತಪಡಿಸಿದರು. ಪ್ರತಿಭಾ ಪಾಟೀಲ, ಮಂಜುಳಾ ಹನಸಿ, ಇತರರು ಇದ್ದರು.
ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ವಂದಿಸಿದರು.