ಅಳ್ನಾವರ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಅತ್ಯುತ್ತಮ ಸ್ಥಾನ ಪಡೆಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೈಕ್ಷಣಿಕ ವರ್ಷಾರಂಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾದ್ಯಂತ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮ ಆಯೋಜಿಸಿ ಓದು-ಬರಹದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾರ್ಯಾಗಾರ ನಡೆಸಿ ಧೈರ್ಯದಿಂದ ಪರೀಕ್ಷೆ ಬರೆಯಲು ತರಬೇತಿ ನೀಡಲಾಗಿದೆ. ನೋಂದಣಿ ಆಗಿದ್ದ 28666 ವಿದ್ಯಾರ್ಥಿಗಳಲ್ಲಿ ಶೇ. 1.5ರಷ್ಟು ಮಕ್ಕಳು ವಿವಿಧ ಕಾರಣಗಳಿಂದ ಗೈರಾಗಿದ್ದಾರೆ. ಶೇ. 98.27ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಈ ಬಾರಿ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಕರು, ಎಸ್ಡಿಎಂಸಿ ಹಾಗೂ ಜನಪ್ರತಿನಿಧಿಗಳು ಮತ್ತು ಪೋಷಕರು ವಿಶೇಷ ಆಸಕ್ತಿ ವಹಿಸಿ ಟಾಪ್ 10ರಲ್ಲಿ ಸ್ಥಾನ ಬರಲು ಸಹಕರಿಸಿದ್ದಾರೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಹೇಳಿದರು.
ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಬಿಇಒ ಆರ್.ಆರ್. ಸದಲಗಿ, ವಾರ್ತಾ ಇಲಾಖೆ ಅಧಿಕಾರಿ ಸುರೇಶ ಹಿರೇಮಠ ಇತರರು ಇದ್ದರು.