ಹುಬ್ಬಳ್ಳಿ : ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕಿತ್ತೂರು ಮಾರ್ಗವಾಗಿ ತೆರಳುವ ಈ ರೈಲು ಮಾರ್ಗ ಯೋಜನೆ ಜಾರಿಗಾಗಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಇದುವರೆಗೂ ಆರಂಭಗೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರೈಲು ಮಾರ್ಗ ಅಳವಡಿಕೆಗೆ ಬೇಕಾದ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಭೂಮಿಯನ್ನು ಕಳೆದ ಮಾರ್ಚ್ನಲ್ಲಿಯೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿತ್ತು. ಭೂಮಿ ಹಸ್ತಾಂತರಗೊಂಡ ನಂತರ ರೈಲ್ವೆ ಇಲಾಖೆ ಟೆಂಡರ್ ಕರೆಯುವ ಕಾರ್ಯ ಮಾಡಬೇಕಿತ್ತು.
ಆದರೆ, ಕೆಐಎಡಿಬಿ (ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್) ಇನ್ನೂ ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಕಾರ್ಯವನ್ನೇ ಮಾಡಿಲ್ಲ. ಧಾರವಾಡ -ಬೆಳಗಾವಿ ನೇರ ರೈಲು ಮಾರ್ಗ ಧಾರವಾಡ ಬೇಲೂರು ಕೈಗಾರಿಕೆ ಪ್ರದೇಶದಿಂದ ಹಾಯ್ದು ಹೋಗುತ್ತದೆ. ನೀಲನಕ್ಷೆ ಪ್ರಕಾರ ಈ ರೈಲು ಮಾರ್ಗ ಅನುಷ್ಠಾನಗೊಳಿಸಿದ್ದರೆ ಮಾರ್ಗ ಮಧ್ಯದ ಯುಫ್ಲೆಕ್ಸ್ ಕಂಪನಿಯ ಬಹುತೇಕ ಜಾಗ ರೈಲ್ವೆ ಇಲಾಖೆಗೆ ಹಸ್ತಾಂತರಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯ ಅಧಿಕಾರಿಗಳ ಕೋರಿಕೆ ಮೇರೆಗೆ ಮಾರ್ಗವನ್ನು ಬದಲಾಯಿಸಲಾಯಿತು. ಮಾರ್ಗ ಬದಲಾವಣೆಯಿಂದಾಗಿ ಪಕ್ಕದ ಅಂದಾಜು 2.5 ಕಿಮೀನಷ್ಟು ಹೆಚ್ಚುವರಿ ಭೂಮಿ ವಶಪಡಿಸಿಕೊಳ್ಳುವುದು ರೈಲ್ವೆ ಇಲಾಖೆಗೆ ಅನಿವಾರ್ಯವಾಯಿತು. ಈ ಎಲ್ಲ ಪ್ರಕ್ರಿಯೆಗೆ ಅಂದಾಜು ಎರಡು ತಿಂಗಳು ಬೇಕಾಯಿತು. ಈ ಮಧ್ಯೆ ಬೆಳಗಾವಿ ಜಿಲ್ಲೆಯ ಕೆಲವು ರೈತರು ಭೂಮಿ ವಶಪಡಿಸಿಕೊಳ್ಳದಂತೆ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಯೋಜನೆ ಜಾರಿಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವುಗೊಂಡ ನಂತರ ಮತ್ತೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿತು. ಇದರಿಂದಾಗಿಯೂ ಯೋಜನೆ ಅನುಷ್ಠಾನ ವಿಳಂಬಗೊಂಡಿತು.
ಮೂಲಗಳ ಪ್ರಕಾರ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾಥಮಿಕ ಹಂತದ ನೋಟಿಫಿಕೇಶನ್ ಕಾರ್ಯಪೂರ್ಣಗೊಂಡಿದೆ. ಇದೀಗ ಎರಡೂ ಜಿಲ್ಲೆಗಳಲ್ಲಿ ರೈಲ್ವೆ ಇಲಾಖೆ ಮತ್ತು ಕೆಐಎಡಿಬಿ ಜಂಟಿಯಾಗಿ ಸರ್ವೆ ಕಾರ್ಯ ನಡೆಸಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು, ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಡೆಯಬೇಕಾದರೆ ಕನಿಷ್ಠ ಮೂರು ತಿಂಗಳಾದರೂ ಬೇಕಾಗಬಹುದು. ವಶಪಡಿಸಿಕೊಂಡ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ ನಂತರವಷ್ಟೇ ರೈಲ್ವೆ ಇಲಾಖೆ ಟೆಂಡರ್ ಬಿಡ್ ಓಪನ್ ಮಾಡಲಿದೆ.
ಯೋಜನೆಯ ವಿವರ :
* ಯೋಜನೆ ಅನುಷ್ಠಾನಕ್ಕೆ ಧಾರವಾಡ ಜಿಲ್ಲೆಯ 226 ಎಕರೆ ಮತ್ತು ಬೆಳಗಾವಿ ಜಿಲ್ಲೆಯ 600 ಎಕರೆ ಭೂಮಿ ಬೇಕು.
* ಯೋಜನೆಗೆ ಬೇಕಾದ ಒಟ್ಟು ವೆಚ್ಚ 927 ಕೋಟಿ ರೂ. ಇದರಲ್ಲಿ ಕರ್ನಾಟಕ ಸರ್ಕಾರ ಅರ್ಧದಷ್ಟು ಆರ್ಥಿಕ ನೆರವು ನೀಡುವ ಜತೆಗೆ ರೈಲು ಮಾರ್ಗ ಅನುಷ್ಠಾನಕ್ಕೆ ಬೇಕಾದ ಭೂಮಿಯನ್ನು ರೈಲ್ವೆ ಇಲಾಖೆಗೆ ಉಚಿತವಾಗಿ ನೀಡಬೇಕು.
* ಕ್ಯಾರಕೊಪ್ಪ, ಮುಮ್ಮಿಗಟ್ಟಿ, ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ, ಕಣವಿ ಕುರವಿನಕೊಪ್ಪ, ದೇಸೂರಿನಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ವಿುಸಲಾಗುತ್ತದೆ. ಕ್ಯಾರಕೊಪ್ಪ ಮತ್ತು ದೇಸೂರಿನಲ್ಲಿ ಜಂಕ್ಷನ್ ನಿರ್ವಿುಸಲಾಗುತ್ತದೆ.
* ಕ್ಯಾರಕೊಪ್ಪ-ಮುಮ್ಮಿಗಟ್ಟಿ ಮಾರ್ಗ ನಿರ್ವಣಕ್ಕೆ ಈಗಾಗಲೇ 243 ಕೋಟಿ ರೂ. ಟೆಂಡರ್ ಕರೆಯಲಾಗಿದೆ.