ಜಿಲ್ಲೆ

ಕೃಷಿ ಉತ್ಪಾದನೆ ಹೆಚ್ಚಳ ಸವಾಲಿಗೆ ಸಂಶೋಧನೆ ಮದ್ದು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಜನಸಂಖ್ಯೆಯು 2050ರ ವೇಳೆಗೆ 1.7 ಶತಕೋಟಿ ತಲುಪುವ ಅಂದಾಜಿದೆ. ಹೀಗಾಗಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಸವಾಲಿನ ಕೆಲಸ. ಇದಕ್ಕೆ ಪೂರಕವಾಗಿ ಸರ್ಕಾರಗಳು ಕೃಷಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ. ಸಂಜಯಕುಮಾರ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಜರುಗಿದ 37ನೇ ಘಟಿಕೋತ್ಸವದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಖಾದ್ಯ ತೈಲ ಉತ್ಪಾದನೆಯು ಶೇ. 40ರಷ್ಟು ವಾರ್ಷಿಕ ಬೇಡಿಕೆಯನ್ನು ಪೂರೈಸುತ್ತಿದ್ದು, ಶೇ. 60ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಮಸಾಲೆ ಪದಾರ್ಥ, ಔಷಽÃಯ ಬೆಳೆಗಳ ಅಭಿವೃದ್ಧಿಗೆ ಯೋಜನೆ ಹಾಗೂ ಸಹಾಯಧನ ಸೌಲಭ್ಯ ರೂಪಿಸಬೇಕು. ಕೃಷಿ ತಂತ್ರಜ್ಞಾನ, ಆಹಾರ ಸಂಸ್ಕರಣೆ, ಕೃಷಿ ನವೋದ್ಯಮಗಳು, ಕೃಷಿ ಮಾರುಕಟ್ಟೆಗಳು, ಪಶು ಸಂಗೋಪನೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಶು ಸಂಗೋಪನೆಯಲ್ಲಿ ಎಮ್ಮೆ, ಆಕಳು ಹಾಲಿನ ಮೇಲೆ ಅವಲಂಬಿತವಾಗದೆ ಕುರಿ, ಒಂಟೆ ಹಾಲು ಉತ್ಪಾದನೆಗೂ ಗಮನ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ಅತಿಯಾದ ಕೀಟನಾಶಕ, ರಸಗೊಬ್ಬರ ಬಳಕೆಯಿಂದ ಪರಿಸರ ಅಸಮತೋಲನವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜೈವಿಕ ಕೃಷಿಯನ್ನು ಉತ್ತೇಜಿಸುವ ಕಾರ್ಯವಾಗಬೇಕು ಎಂದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಮೈಸೂರು ಕಂದಾಯ ವಿಭಾಗದ ಮಂಡ್ಯದಲ್ಲಿ `ನೂತನ ಸಮಗ್ರ ಕೃಷಿ ವಿಶ್ವ ವಿಶ್ವವಿದ್ಯಾಲಯ ಪ್ರಾರಂಭಿಸಲು ಪರಿಣಿತರ ಸಮಿತಿ ರಚಿಸಲಾಗಿದೆ. ಕೃಷಿ ಭಾಗ್ಯ ಮುಂದುವರಿಸಿ 200 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಕೃಷಿ ಪದವೀಧರರು ಸರ್ಕಾರಿ ಉದ್ಯೋಗ ಬಯಸದೆ, ಸ್ವಯಂ ಉದ್ಯೋಗಿಯಾಗಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು.
ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪಿ.ಎಲ್. ಪಾಟೀಲ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಯ ವರದಿ ಮಂಡಿಸಿದರು.
ಗೌರವ ಡಾಕ್ಟರೇಟ್ ಪ್ರದಾನ: ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಽಪತಿ ಗೆಹಲೋತ್ ಅವರು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಗೈರುಹಾಜರಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
933 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಘಟಿಕೋತ್ಸವದಲ್ಲಿ 69 ಪಿಎಚ್.ಡಿ, 237 ಸ್ನಾತಕೋತ್ತರ, 627 ಸ್ನಾತಕ ಪದವಿ ಸೇರಿ 933 ಅಭ್ಯರ್ಥಿಗಳಿಗೆ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು. ವಿವಿಧ ಪದವಿಗಳಲ್ಲಿ ರ‍್ಯಾಂಕ್ ವಿಜೇತರಿಗೆ 46 ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕ, 10 ಇತರೆ ಚಿನ್ನದ ಪದಕ, 9 ನಗದು ಬಹುಮಾನಗಳನ್ನು ವಿತರಿಸಿದರು.