ಜಿಲ್ಲೆ

ಸುಂದರ ಭವಿಷ್ಯದ ಕನಸು ಕಂಡಿದ್ದ ವೈದ್ಯೆಯ ಬಾಳಲ್ಲಿ ವಿಧಿಯ ಆಟವೇ ಬೇರೆಯಾಗಿತ್ತು!

ಧಾರವಾಡ: ಕೇವಲ 15 ದಿನಗಳ ಹಿಂದಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಡಾ. ವೀಣಾ ಪ್ರಕಾಶ್​  ಭವಿಷ್ಯದ ಕನಸು ಕಂಡಿದ್ದರು. ಆದರೆ, ನಿನ್ನೆ ಬೆಳಗ್ಗೆ ನಡೆದ ದುರ್ಘಟನೆಯಲ್ಲಿ ಭೀಕರವಾಗಿ ಮೃತಪಟ್ಟರು.

ನಗರದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿದ್ದ ಡಾ. ವೀಣಾ ಪ್ರಕಾಶ್, ಖ್ಯಾತ ಉದರ ರೋಗ ತಜ್ಞ ಡಾ. ಪ್ರಕಾಶ್ ಮತ್ತಿಹಳ್ಳಿ ಅವರ ಪತ್ನಿ. ಈ ದಂಪತಿ 15 ದಿನಗಳ ಹಿಂದಷ್ಟೇ (ಡಿ. 30) ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಮನೆಯಲ್ಲಿ ಪೂಜೆ, ಹೋಮಗಳನ್ನು ನಡೆಸಿ, ಸುಂದರ ಭವಿಷ್ಯದ ಕನಸು ಕಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಡಾ. ವೀಣಾ ಸಾವಿನ ಸುದ್ದಿಯು ಅವರ ರೋಗಿಗಳು, ಸಂಬಂಧಿಕರು, ಬಂಧುಗಳಿಗೆ ಆಘಾತ ಮೂಡಿಸಿದೆ.

ಘಟನೆ ಹಿನ್ನೆಲೆ

ಬೆಳಗ್ಗೆ 7.30ರ ಸುಮಾರಿಗೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಟೆಂಪೋ ಟ್ರಾವೆಲರ್​ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತು. ಟಿಟಿ ದಾವಣಗೆರೆಯಿಂದ ಗೋವಾಗೆ ತೆರಳುತ್ತಿತ್ತು. ಲಾರಿ ಬೆಳಗಾವಿ ಕಡೆಯಿಂದು ಬರುತ್ತಿತ್ತು. ಆರಂಭದಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಕೆಲವರು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಒಟ್ಟು 13 ಮಂದಿ ಮೃತರಲ್ಲಿ 12 ಮಂದಿ ಬಾಲ್ಯ ಸ್ನೇಹಿತೆಯರಾಗಿದ್ದು, ಓರ್ವ ಟೆಂಪೋ ಟ್ರಾವೆಲರ್​ ಚಾಲಕನೆಂದು ತಿಳಿದುಬಂದಿದೆ.

ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್‌ ಪಾಲ್ಸ್‌ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಇತ್ತೀಚಿಗೆ ನಡೆದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಹಲವು ವರ್ಷಗಳ ನಂತರ ಭೇಟಿಯಾಗಿದ್ದ ಬಾಲ್ಯ ಸ್ನೇಹಿತೆಯರು ಪಣಜಿಗೆ ಪ್ರವಾಸ ಹೊರಟಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಮುಂಜಾನೆ 3 ಗಂಟೆಗೆ ದಾವಣಗೆರೆ ಬಿಟ್ಟಿದ್ದರು.

ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ ಸಮೀಪ ಬೆಳಗ್ಗೆ 7.30ರ ವೇಳೆಗೆ ಯಮರೂಪಿಯಾಗಿ ಬಂದ ಮರಳು ಸಾಗಣೆ ಟಿಪ್ಪರ್‌ ಲಾರಿಯು ಟೆಂಪೋ ಟ್ರಾವೆಲ್ಲರ್​ಗೆ ಡಿಕ್ಕಿ ಹೊಡೆದಿದೆ. ಟೆಂಪೋ ಟ್ರಾವೆಲರ್‌ನಲ್ಲಿದ್ದ 16 ಮಹಿಳೆಯರ ಪೈಕಿ 12 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇವರ ಜತೆಗೆ ಟಿಟಿ ಚಾಲಕನೂ ಸತ್ತಿದ್ದಾನೆ. ಉಳಿದವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು

ದಾವಣಗೆರೆಯ ಪ್ರೀತಿ ರವಿಕುಮಾರ (46), ಪರಂಜ್ಯೋತಿ ಶಶಿಧರ ಹೂಂಚೂರ (47), ವರ್ಷಿತಾ ವೀರೇಶ (46), ಮಂಜುಳಾ ನಟೇಶ್ ಜಿ.ಬಿ. (47), ರಾಜೇಶ್ವರಿ ಶಿವಕುಮಾರ ಬಂಡಮ್ಮನವರ (46), ಡಾ. ವೀಣಾ ಪ್ರಕಾಶ ಮಟ್ಟಿಹಳ್ಳಿ (47), ಕ್ಷೀರಾ ಸುರೇಶಬಾಬು ಪೊರಾಳ (21), ಹೇಮಲತಾ ಕೆ. ಉರ್ಫ್ ಮಾನಸಿ (48), ಮಿನಿ ಬಸ್ ಚಾಲಕ ರಾಣೆಬೆನ್ನೂರು ಮೂಲದ ರಾಜು ಸೋಮಪ್ಪಾ ಗೋರಬಣ್ಣವರ (38), ಕ್ಲೀನರ್ ಮಲ್ಲಿಕಾರ್ಜುನ ಉಡಗಟ್ಟಿ (27) ಮೃತಪಟ್ಟವರು. ಇನ್ನೋರ್ವ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶಿವಮೊಗ್ಗದ ವೇದಾ ಮಂಜುನಾಥ್ ಅವರನ್ನು ಸಂಜೆ ಬೆಂಗಳೂರಿಗೆ ಏರ್​ಲಿಪ್ಟ್ ಮಾಡಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೇದಾ ತವರು ಮನೆ ದಾವಣಗೆರೆ. ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಬಂದು ಪ್ರವಾಸಕ್ಕೆ ತೆರಳಿದ್ದರು.