ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಕೇವಲ ಕರಿಬೇವು ಕೃಷಿ ಮಾಡಿ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ರೈತ ದಾದಾಸಾಬ್ ಅಲ್ಲಾಭಕ್ಷ ಮಕಾನದಾರ ಕೋಟ್ಯಧೀಶರಾಗಿದ್ದಾರೆ ! ಅಚ್ಚರಿ ಎನಿಸಿದರೂ ಇದು ಸತ್ಯ. ಒಟ್ಟು ಎರಡು ಕಡೆ 10 ಎಕರೆಯಲ್ಲಿ ಕರಿಬೇವು ಬೆಳೆಯುತ್ತಿರುವ ದಾದಾಸಾಬ್ ಮಕಾನದಾರ ರಡು ವರ್ಷಗಳ ಹಿಂದೆ ಆಂದ್ರಪ್ರದೇಶದ ವಿಜಯವಾಡದಿಂದ 500 ರೂ.ಗೆ ಒಂದು ಕೆಜಿಯಂತೆ ಒಟ್ಟು 60 ಕೆಜಿ ಸುಹಾಸಿನಿ ತಳಿಯ ಬೀಜಗಳನ್ನು ತಂದು ಬೀಜ ಬಿತ್ತನೆ ಮಾಡಿದ್ದಾರೆ. ಇನ್ನುಳಿದ 5 ಎಕರೆಯಲ್ಲಿ ಸ್ಥಳೀಯವಾಗಿ ಸಿಗುವ ಜವಾರಿ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. 2/2 ಅಂತರದಲ್ಲಿ ಬೀಜ ಬಿತ್ತನೆ: ಕರಿಬೇವು ಬೀಜಗಳನ್ನು ಒಂದು ಸಾಲಿನಲ್ಲಿ ಎರಡು ಅಡಿ ಅಗಲ ಅಂತರದಲ್ಲಿ ಮತ್ತು ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರ ಬಿಟ್ಟು ಬಿತ್ತನೆ ಮಾಡಿದ್ದಾರೆ. ಆರು ತಿಂಗಳಿಗೆ ಮೊದಲ ಕಟಾವು: ಬೀಜ ಬಿತ್ತನೆ ಬಳಿಕ ಕರಿಬೇವು ಬೆಳೆ ಮೊಣಕಾಲುವರೆಗೆ ಎತ್ತರ ಆಗುತ್ತಿದ್ದಂತೆ ಮೊದಲ ಕಟಾವು ಆರು ತಿಂಗಳಿಗೆ ಮಾಡಲಾಗಿದೆ. ನಂತರ ಪ್ರತಿ 3 ತಿಂಗಳಿಗೊಮ್ಮ ಕಟಾವು ಮಾಡಲಾಗುತ್ತಿದೆ. ಹನಿ ನೀರಾವರಿ: ಭೂಮಿ ಖರೀದಿಸಿದ ನಂತರ 17 ಎಕರೆಯಲ್ಲಿ ಮೂರು ಕಡೆಗಳಲ್ಲಿ ಬೋರ್ವೆಲ್ ಕೊರೆಸಲಾಗಿದ್ದು, ಹನಿ ನೀರಾವರಿ ಮೂಲಕ ಬೆಳೆ ಬೆಳೆಯಲಾಗುತ್ತಿದೆ. 17 ಎಕರೆ ಭೂಮಿ ಖರೀದಿ: 15 ವರ್ಷಗಳಿಂದ ಕರಿಬೇವು ಬೆಳೆಯಿಂದ ಬಂದ ಹಣದಿಂದ ಈವರೆಗೆ ಒಟ್ಟು 17 ಎಕರೆ ಭೂಮಿ ಖರೀದಿಸಿದ್ದಾರೆ ರೈತ ದಾದಾಸಾಬ್. ದುಬ್ಬನಮರಡಿಯಲ್ಲಿ 2010ರಲ್ಲಿ ಮೊದಲು 4 ಎಕರೆ ಖರೀದಿಸಿದರು. 2017ರಲ್ಲಿ 5 ಎಕರೆ, 2021ರಲ್ಲಿ 3 ಎಕರೆ ಹಾಗೂ 2025ರಲ್ಲಿ 5 ಎಕರೆ ಸೇರಿ ಒಟ್ಟು 17ಎಕರೆ ಭೂಮಿ ಖರೀದಿಸಿದ್ದಾರೆ. 2.28 ಲಕ್ಷ ರೂ. ಸಬ್ಸಿಡಿ: ತೋಟಕಾರಿಕೆ ಇಲಾಖೆಯಿಂದ 5 ಎಕರೆ ಜಮೀನಿನಲ್ಲಿ ಕರಿಬೇವು ಬೆಳೆಯಲು ಹನಿ ನೀರಾವರಿಗಾಗಿ 2.28 ಲಕ್ಷ ರೂ. ಸಹಾಯಧನ ನೀಡಲಾಗಿದೆ. 10 ಎಕರೆಗೆ 20 ಟನ್ ಇಳುವರಿ: 10 ಎಕರೆ ಭೂಮಿಯಲ್ಲಿ 20 ಟನ್ ಕರಿಬೇವು ಇಳುವರಿ ಸಿಗುತ್ತದೆ. ಒಮ್ಮೆ ಕಟಾವು ಮಾಡಿದರೆ 3 ಕ್ವಿಂಟಾಲ್ನಷ್ಟು ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಬೇಡಿಕೆ ಇದ್ದ ಕಡೆ ದಿನ ಬಿಟ್ಟು ಕಟಾವು ಮಾಡಿ ಕಳುಹಿಸಲಾಗುತ್ತದೆ. 25 ರೂ.ನಿಂದ ಹಿಡಿದು 50 ರೂ.ಗೆ ಕೆಜಿಯಂತೆ ಮಾರಾಟವಾಗುತ್ತದೆ. 14 ಲಕ್ಷ ರೂ. ಆದಾಯ: ಕಳೆದ ವರ್ಷ 5 ಎಕರೆಯಲ್ಲಿ ಬಂದ ಇಳುವರಿಯಿಂದ 16 ಲಕ್ಷ ರೂ. ಆದಾಯ ಬಂದಿತ್ತು. ಅದರಲ್ಲಿ 2 ಲಕ್ಷ ರೂ. ಖರ್ಚು ಕಳೆದು 14 ಲಕ್ಷ ರೂ. ಆದಾಯವಾಗಿದೆ. ಇದು ವರ್ಷದಿಂದ ವರ್ಷಕ್ಕೆ ಇಳುವರಿ ಮತ್ತು ಆದಾಯ ಹೆಚ್ಚುತ್ತ ಹೋಗುತ್ತದೆ. ಇನ್ನುಳಿದ 5 ಎಕರೆಯಲ್ಲಿ ಕಳೆದ ವರ್ಷ ಜೂನ್ನಲ್ಲಿ ಹೊಸದಾಗಿ ಬೀಜ ಬಿತ್ತನೆ ಮಾಡಲಾಗಿದೆ. ಆ ಜಮೀನಿನಲ್ಲಿ ಈವರೆಗೆ 3 ಬಾರಿ ಕಟಾವು ಮಾಡಲಾಗಿದೆ. 7 ಎಕರೆ ಮಿಶ್ರಬೆಳೆ: ಎರಡು ಎಕರೆಯಲ್ಲಿ ಸೋಯಾಬೀನ್ ಬೆಳೆ, 2 ಎಕರೆಯಲ್ಲಿ ಕಬ್ಬು, 3 ಎಕರೆಯಲ್ಲಿ ಗೋವಿನನಜೋಳ ಬೆಳೆದಿದ್ದಾರೆ. ನಿರ್ವಹಣೆ: ಕರಿಬೇವು ಬೆಳೆಗೆ 4 ತಿಂಗಳಿಗೊಮ್ಮೆ ಎನ್ಪಿಕೆ ಗೊಬ್ಬರ ನೀಡಲಾಗುತ್ತದೆ. ಕಟಾವು ಮಾಡಿದ ಬಳಿಕ ಟಾನಿಕ್ ಸಿಂಪಡಣೆ ಮಾಡಲಾಗುವುದು. ಮಳೆಗಾಲದಲ್ಲಿ ಎಲೆಚುಕ್ಕಿರೋಗ, ಡಿಸೆಂಬರ್ನಲ್ಲಿ ರಸ ಹೀರುವ ಕೀಟಬಾಧೆ ತಗಲುತ್ತದೆ. ಆಗ ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದು ಸೂಕ್ತ ಔಷಧ ಸಿಂಪಡಣೆ ಮಾಡಬೇಕು. ಇದರಿಂದ ರೋಗ ಹತೋಟಿಗೆ ಬರುತ್ತದೆ. 15 ವರ್ಷ ಇಳುವರಿ: ಒಂದು ಬಾರಿ ಜಮೀನಿನಲ್ಲಿ ಕರಿಬೇವು ಬೀಜ ಬಿತ್ತನೆ ಮಾಡಿದ ಬಳಿಕ 15 ವರ್ಷದವರೆಗೆ ಇಳುವರಿ ಪಡೆಯಬಹುದು. ನಂತರ ಬೇರುಸಮೇತ ಗಿಡಗಳನ್ನು ಕಿತ್ತು ಹಾಕಬೇಕು. ಮತ್ತೆ ಹೊಸದಾಗಿ ಬೀಜ ಬಿತ್ತನೆ ಮಾಡಬೇಕು. ಚಿಕ್ಕಂದಿನಲ್ಲೇ ಕರಿಬೇವು ವ್ಯಾಪಾರ: 45 ವರ್ಷದ ದಾದಾಸಾಬ್ ತಮ್ಮ 17ನೇ ವಯಸ್ಸಿನಿಂದಲೇ ಕರಿಬೇವು ಚಿಲ್ಲರೆ ಮಾರಾಟ ಮಾಡುತ್ತಿದ್ದರು. ಬಳಿಕ ಕರಿಬೇವು ತೋಟ, ಗಿಡಗಳನ್ನು ಗುತ್ತಿಗೆ ಪಡೆದು ಕಟಾವು ಮಾಡಿ ಧಾರವಾಡ ಮತ್ತು ಬೆಳಗಾವಿ ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಿದ್ದರು. ಕರಿಬೇವು ಬೆಳೆಯುವ ಬಗೆ, ಕಟಾವು, ಮಾರಾಟ, ಮಾರುಕಟ್ಟೆ ಹೀಗೆ ಎಲ್ಲ ವಿಷಯ ಅರಿತುಕೊಂಡರು. ಕ್ರಮೇಣ ಸಮೀಪದ ದುಬ್ಬನಮರಡಿ ಗ್ರಾಮದಲ್ಲಿ 2010ರಿಂದ ಈವರೆಗೆ 17 ಎಕರೆ ಭೂಮಿ ಖರೀದಿಸಿ ಕರಿಬೇವು ಬೆಳೆಯುತ್ತಿದ್ದಾರೆ.
ಜಿಲ್ಲೆಯ ರೈತರು ಕರಿಬೇವು, ಪೇರಲ, ಸೀತಾಫಲ, ಚಿಕ್ಕು, ಮಾವು, ತಾಳೆ, ಮತ್ತಿತರ ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆ ಮತ್ತು ನರೇಗಾ ಯೋಜನೆಯಡಿ ಸಹಾಯಧನ ಸಿಗುತ್ತದೆ. ಅರ್ಹ ರೈತರು ಇಂಥ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು. | ಕಾಶಿನಾಥ ಭದ್ರಣ್ಣವರ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಧಾರವಾಡ ಮೊದಲು ನಾನು ಕರಿಬೇವು ವ್ಯಾಪಾರ ಮಾಡುತ್ತಿದ್ದೆ. ಮೊದಲು ಮಾರುಕಟ್ಟೆ ವ್ಯವಸ್ಥೆ ತಿಳಿದುಕೊಂಡೆ. ಬಳಿಕ ಹಂತ ಹಂತವಾಗಿ ಕರಿಬೇವು ಮಾರಾಟದ ಮೂಲಕವೇ 15 ವರ್ಷಗಳಲ್ಲಿ 17 ಎಕರೆ ಭೂಮಿ ಖರೀದಿಸಿದ್ದೇನೆ. ಈಗ ದುಬ್ಬನಮರಡಿಯಲ್ಲಿ ಭೂಮಿ ಬೆಲೆ ಎಕರೆಗೆ ಸುಮಾರು 25 ಲಕ್ಷ ರೂ.ವರೆಗೆ ಆಗಿದೆ. 25 ಲಕ್ಷ ರೂ.ಗೆ 1 ಎಕರೆಯಂತೆ 17 ಎಕರೆಗೆ ಈಗ 4.25 ಕೋಟಿ ರೂಪಾಯಿ ಮೌಲ್ಯದ ಭೂಮಿ ಸಂಪಾದಿಸಿದ್ದೇವೆ. ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಭೂಮಿತಾಯಿ ಕೈ ಹಿಡಿಯುತ್ತಾಳೆ ಎಂಬುದಕ್ಕೆ ನಾನೇ ಸಾಕ್ಷಿ. | ದಾದಾಸಾಬ್ ಮಕಾನದಾರ್ ಕರಿಬೇವು ಬೆಳೆಗಾರ ತೋಟಗಾರಿಕೆ ಬೆಳೆ ಬೆಳೆಯುವವರು ಮೊದಲೇ ಆ ಬೆಳೆ ಕುರಿತು ಮಾರುಕಟ್ಟೆ ಸ್ಥಿತಿಗತಿ ಅರಿತುಕೊಳ್ಳಬೇಕು. ಯಾವ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಲಾಭ ಹೆಚ್ಚು ಎಂಬುದನ್ನು ಮೊದಲೇ ತಿಳಿದುಕೊಳ್ಳಬೇಕು. ಇದರಿಂದ ಫಸಲು ಕೈಗೆ ಬರುವ ಸಮಯಕ್ಕೆ ಒಳ್ಳೆಯ ಲಾಭ ಮಾಡಿಕೊಳ್ಳಬಹುದು. | ಇಮ್ತಿಯಾಜ್ ಚೆಂಗಾಪುರಿ, ಹಿರಿಯ ಸಹಾಯಕ ನಿರ್ದೇಶಕ, ತೋಟಕಾರಿಕೆ ಇಲಾಖೆ ಧಾರವಾಡ