ಜಿಲ್ಲೆ

ರೈತ ಜಗಜಿತ್ ಸಿಂಗ್ ದಲ್ಲೆವಾಲ್ ಪರ ಧರಣಿ

ಬಳ್ಳಾರಿ : ದೆಹಲಿಯ ಗಡಿ ಪ್ರದೇಶದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ರೈತ ಜಗಜಿತ್ ಸಿಂಗ್ ದಲ್ಲೆವಾಲ್ ಬೆಂಬಲವಾಗಿ ಇಲ್ಲಿನ ಬಿಮ್ಸ್ ಬಳಿಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಸೋಮವಾರ ಪ್ರತಿಭಟನೆ ನಡೆಸಿತು.

ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ನಡುವೆ ನೇರ ಸಂವಾದಕ್ಕೆ ಅನುಕೂಲವಾಗಲು ತಾವು ತಕ್ಷಣ ಮಧ್ಯಪ್ರವೇಶಿಸಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರಾಜ್ಯಗಳಲ್ಲಿ ಎಂಎಸ್‌ಪಿಯನ್ನು ಕಾನೂನಿನ ವ್ಯಾಪ್ತಿಯೊಳಗೆ ತರುವುದರ ಮೂಲಕ ತ್ವರಿತ ಮತ್ತು ಪಾರದರ್ಶಕ ಅನುಷ್ಠಾನವನ್ನು ಜಾರಿಗೊಳಿಸಬೇಕು. ಎಂಎಸ್‌ಪಿ ಬದ್ಧತೆಗಳನ್ನು ಸ್ಥಿರವಾಗಿ ಗೌರವಿಸಲಾಗುತ್ತಿದೆ. ಇದಕ್ಕಾಗಿ ಮೇಲ್ವಿಚಾರಣೆ ಕಾರ್ಯವಿಧಾನವನ್ನು ಸ್ಥಾಪಿಸಿ ರೈತ ಸಮುದಾಯದೊಳಗೆ ನಂಬಿಕೆ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಬೇಕು. ಎಲ್ಲ ರೈತರಿಗೆ ಎಂಎಸ್‌ಪಿಯ ಪರಿಣಾಮಕಾರಿ ವಿತರಣೆ ಮತ್ತು ಪಾವತಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಬೆಂಬಲಿಸಲು ಅಗತ್ಯ ಸಂಪನ್ಮೂಲಗಳನ್ನು ನಿಯೋಜಿಸಬೇಕು. ನ್ಯಾಯಯುತವಾಗಿ ನಡೆಯುತ್ತಿರುವ ಈ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಸ್ಪಂದನೆ ಮಾಡಬೇಕು ಎಂದರು.