ಪಹಣಿಯ 11ನೇ ಕಾಲಂನಲ್ಲಿ ವಕ್ಫ್​ ಆಸ್ತಿ, ಕರ್ನಾಟಕ ಸರ್ಕಾರ ಪದಗಳನ್ನು ತೆಗೆಯುವಂತೆ ಆಗ್ರಹಿಸಿ ಕುಂಟೋಜಿ ಗ್ರಾಮದ ರೈತರು ಮುದ್ದೇಬಿಹಾಳ ತಹಸೀಲ್ದಾರ್​ ಕಚೇರಿ ಎದುರು ಧರಣಿ ಪ್ರಾರಂಭಿಸಿದರು. ಬಸಯ್ಯ ಮಠ, ನಯಿಂಪಾಷಾ ಇನಾಮದಾರ, ಶಾಂತಗೌಡ ನೆಲಗದ್ದಿ ಇದ್ದಾರೆ. 
ಜಿಲ್ಲೆ

ಕುಂಟೋಜಿ ಗ್ರಾಮದ ರೈತರಿಂದ ಧರಣಿ ಆರಂಭ

ಮುದ್ದೇಬಿಹಾಳ: ಪಹಣಿಯ 11ನೇ ಕಾಲಂನಲ್ಲಿ ವಕ್ಫ್​ ಆಸ್ತಿ, ಕರ್ನಾಟಕ ಸರ್ಕಾರ ಎಂದು ನಮೂದಿಸಲಾಗಿರುವ ಪದಗಳನ್ನು ತೆಗೆದು ಹಾಕುವಂತೆ ಆಗ್ರಹಿಸಿ ಕುಂಟೋಜಿ ಗ್ರಾಮದ ರೈತರು ತಹಶೀಲ್ದಾರ್​ ಕಚೇರಿ ಎದುರು ಗುರುವಾರದಿಂದ ಅರ್ನಿದಿಷ್ಠಾವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ನ.4ರಂದು ಬೃಹತ್​ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ, ತಹಸೀಲ್ದಾರ್​ಗೆ ಗಡುವು ನೀಡಿದ್ದರೂ ಪಹಣಿಯಲ್ಲಿ ಬದಲಾವಣೆ ಆಗದ ಕಾರಣ ಅಂದು ನೀಡಿದ್ದ ಎಚ್ಚರಿಕೆಯಂತೆ ಅಹೋರಾತ್ರಿ ಧರಣಿಗೆ ಚಾಲನೆ ನೀಡಿದರು. ರೈತರಿಗೆ ಮಾಹಿತಿ ನೀಡದೆ ಪಹಣಿಯ 11ನೇ ಕಾಲಂನಲ್ಲಿ ವಕ್ಫ್​ ಬೋರ್ಡ್​, ಕರ್ನಾಟಕ ಸರ್ಕಾರ ಹೆಸರು ನಮೂದಿಸಿದ್ದು ರೈತರಿಗೆ ಆತಂಕ ತಂದೊಡ್ಡಿದ್ದು ಸಮಸ್ಯೆಗೆ ಪರಿಹಾರ ಸಿಗುವವರೆಗೂ ಧರಣಿ ಕೈಬಿಡದಿರಲು ತೀರ್ಮಾನಿಸಿದರು.

ಕುಂಟೋಜಿ, ಬಿದರಕುಂದಿ ಗ್ರಾಮ ವ್ಯಾಪ್ತಿಯ 29 ರೈತರ ಸರ್ವೆ ನಂಬರ್​ಗಳಾದ 277, 278, 279, 289, 290, 300, 301, 302, 303, 304, 305, 311, 312, 313, 466/1 ರಲ್ಲಿರುವ ಅಂದಾಜು 380 ಎಕರೆ ಜಮೀನು ಸ್ವಂತ ಮಾಲ್ಕಿ ಕಬ್ಜಾ ವಹಿವಾಟಿನ ಜಮೀನುಗಳಾಗಿವೆ. ಇವುಗಳಿಗೆ ಸೇರಿದ ಪಹಣಿಯಲ್ಲಿ ವಕ್ಫ್​ ಆಸ್ತಿ, ಕರ್ನಾಟಕ ಸರ್ಕಾರ ಎಂದು 2019ರ ಜನವರಿಯಲ್ಲಿ ಸೇರಿಸಲಾಗಿದೆ.

4&3&1961ರಂದು ಬಾಗಲಕೋಟೆಯ ಎಸಿಯವರ ಸೂಚನೆ ಮೇರೆಗೆ 6 ಪಟ್ಟು ರಕಂ ತುಂಬಿ ರಿಗ್ರ್ಯಾಂಟ್​ ಮಾಡಿಕೊಂಡ ನಂತರ ಸರ್ಕಾರ ಪದವನ್ನು ವಜಾಗೊಳಿಸಿಕೊಳ್ಳಲಾಗಿದೆ. ಹೀಗಿದ್ದರೂ ಏಕಾಏಕಿ ವಕ್ಫ್​ ಆಸ್ತಿ, ಕರ್ನಾಟಕ ಸರ್ಕಾರ ಎಂದು ನಮೂದಿಸಿರುವುದು ಷಡ್ಯಂತ್ರವಲ್ಲದೆ ಬೇರೇನೂ ಅಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬಸಯ್ಯ ಮಠ, ನಯಿಂಪಾಷಾ ಇನಾಮದಾರ, ಶಾಂತಗೌಡ ನೆಲಗದ್ದಿ, ಬಸನಗೌಡ ಗೋನಾಳ, ಶಿವನಗೌಡ ಕರಕಳ್ಳಿ, ಸಂಗನಗೌಡ ಸೌದಿ, ಬಸವಂತ್ರಾಯ ಬಿರಾದಾರ, ಬಾಳಪ್ಪಗೌಡ ನಿಂಗದಳ್ಳಿ, ಸಿದ್ರಾಮಪ್ಪ ಕೋಳುರ, ಯಲ್ಲಪ್ಪ ಯರಝರಿ ಇನ್ನಿತರರು ಇದ್ದರು.