ಜಿಲ್ಲೆ

ನಾಟಕಗಳು ಮಾಧ್ಯಮಗಳಾಗಿ ಕಾರ್ಯ

ಪರಶುರಾಮಪುರ: ಸಾಮಾಜಿಕ ಬದಲಾವಣೆಗೆ ನಾಟಕಗಳು ಅತ್ಯುತ್ತಮ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುವ ಚಾಕಚಕ್ಯತೆ ಹೊಂದಿವೆ ಎಂದು ವಲಯ ಧರ್ಮಸ್ಥಳ ಸಂಸ್ಥೆಯ ಅಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸ್ವ ಸಹಾಯ ಸಂಘ ಹಾಗೂ ದಾವಣಗೆರೆಯ ಶ್ರುತಿ ಕಲಾ ತಂಡ ಚೌಳೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೀರು ಉಳಿಸಿ ಜಾಗೃತಿ ನಾಟಕಾಭಿನಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನೀರು, ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯತೆ ಕುರಿತು ಅರಿವು ಮೂಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಶ್ರುತಿ ಕಲಾತಂಡದ ಕಲಾವಿದರು ಬೀದಿನಾಟಕ ಪ್ರದರ್ಶಿಸಿದರು.

ಪರಶುರಾಮಪುರ ವಲಯ ಮೇಲ್ವಿಚಾರಕ ಮಂಜುನಾಥ ಗೊಂಡ, ಗ್ರಾಪಂ ಸದಸ್ಯರಾದ ವಿದ್ಯಾ, ಲತಾ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಭವಾನಿ, ಟಿ.ತಿಪ್ಪೇಸ್ವಾಮಿ, ವೆಂಕಟೇಶ, ಗುರುಪಾದಸ್ವಾಮಿ, ಲತಾ, ಮಮತಾ ಇತರರಿದ್ದರು.