ಮೂಡಿಗೆರೆ: ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಿ ಅಭಿವೃದ್ಧಿಪಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರು 1.51ಲಕ್ಷ ರೂ. ನೀಡಿದ ಸಹಾಯಧನದ ಚೆಕ್‌ನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ ಅವರು ಶನಿವಾರ ಗ್ರಾಪಂ ಅಧ್ಯಕ್ಷೆ ಜರೀನಾಗೆ ಚೆಕ್ ಹಸ್ತಾಂತರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ ಮಾತನಾಡಿ, ತಾಲೂಕಿನ ಬಕ್ಕಿ, ಬೆಟ್ಟಗೆರೆ, ಗೋಣಿಬೀಡು, ತ್ರಿಪುರ, ಲೋಕವಳ್ಳಿ, ಹೊಸಪೇಟೆ ಸೇರಿದಂತೆ 7 ಕಡೆ ಕಡುಬಡವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆ ನಿರ್ಮಿಸಿ ಕೊಡಲಾಗಿದೆ. 12 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನಸಹಾಯ ನೀಡಲಾಗಿದೆ. ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಕೆರೆ ಅಭಿವೃದ್ಧಿಪಡಿಸಲಾಗಿದೆ. ಶಾಲೆ, ಆಸ್ಪತ್ರೆ, ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ 75 ಕಡೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ. 127 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಯೋಜನೆಯಡಿ ಧನಸಹಾಯ ನೀಡಲಾಗಿದೆ ಎಂದರು.
ಬಣಕಲ್ ಗ್ರಾಪಂ ಅಧ್ಯಕ್ಷೆ ಜರೀನಾ, ಗ್ರಾಪಂ ಸದಸ್ಯೆ ಆತೀಕಾ ಭಾನು, ಪಿಡಿಒ ಕೃಷ್ಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಸಂದೀಪ್, ತಾಲೂಕು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಕ್ಯಾಪ್ಟನ್ ಕೆ.ಎಲ್.ರವಿ, ಬಣಕಲ್ ಶೌರ್ಯ ವಿಪತ್ತು ಘಟಕದ ಜಿ.ಬಿ.ಜಗದೀಶ್, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಅರುಣ್, ಸೇವಾ ಪ್ರತಿನಿಧಿ ಎಸ್.ಎನ್.ರವಿ, ರೇವತಿ ಇತರರಿದ್ದರು.