ಜಿಲ್ಲೆ

ಹೆಣ್ಣು, ಗಂಡಿನ ನಡುವಿನ ಅಸಮಾನತೆ ಹೋಗಲಾಡಿಸೋಣ: ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಹೇಳಿಕೆ

ಮಂಡ್ಯ: ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಹೆಣ್ಣು ಮತ್ತು ಗಂಡು ಅಸಮಾನತೆಯನ್ನು ಹೋಗಲಾಡಿಸಲು ಮುಂದಾಗಬೇಕಿದೆ ಎಂದು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಹೇಳಿದರು.

ತಾಲೂಕಿನ ಕೋಣನಹಳ್ಳಿ ಎಂ.ಜಿ.ಬಡಾವಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜ್ಞಾನವಿಕಾಸ ಯೋಜನೆಯಡಿ ಆಯೋಜಿಸಿದ್ದ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ನಿಮ್ಮ ನೆರೆ ಹೊರೆಯಲ್ಲಿ ಹೆಣ್ಣು ಶಿಶು ಸಂರಕ್ಷಿಸುವ ಆಂದೋಲನಗಳು ಹೆಚ್ಚಾಗಬೇಕಿದೆ. ಅಂತೆಯೇ ಹೆಣ್ಣು ಮಗುವಿನ ಬಗ್ಗೆ ವಿಶೇಷ ಕಾಳಜಿಯನ್ನು ತಾಳಬೇಕಿದೆ ಎಂದರು.

ಆಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಮಹಿಳೆಯರು ಅರ್ಥೈಸಿಕೊಂಡು ಸಂಘಗಳ ಮೂಲಕ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವುದು ಸಂತಸ ತಂದಿದೆ. ಮಹಿಳೆಯರಲ್ಲಿ ಅಶುಚಿತ್ವ ಮತ್ತು ಗ್ರಾಮೀಣ ಬದುಕಿನ ಹಲವು ಅನೈರ್ಮಲ್ಯದ ವಾತಾವರಣವನ್ನು ಬೀದಿ ಬದಿಗಳಲ್ಲಿ ಕಾಣಬಹುದಾಗಿತ್ತು. ಇಂದು ಕಾಲ ಬದಲಾದಂತೆ ಮಹಿಳೆಯರು ಅಭಿವೃದ್ಧಿಯ ಕಾರ್ಯಗಳ ಜತೆಯಲ್ಲಿ ವೈಯಕ್ತಿಕ ಸ್ವಾವಲಂಭನೆ ಜೀವನವನ್ನು ನಡೆಸಲು ಅನುಕೂಲವಾಗುವ ರೀತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳು ಕಾರಣವಾಗಿವೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಸಂಯೋಜನಾಧಿಕಾರಿ ಶ್ವೇತಾ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದಡಿ ಪ್ರತಿ ತಿಂಗಳು ತಾಲೂಕಿನ ಒಂದು ಹಳ್ಳಿಗಳಲ್ಲಿ ಶುಚಿತ್ವ, ಆರೋಗ್ಯ, ಪರಿಸರಕ್ಕೆ ಸಂಬಂಧಿಸಿದ ಹಾಗೆ ತರಬೇತಿಗಳನ್ನು ನೆರವೇರಿಸುತ್ತಾ ಬರಲಾಗುತ್ತಿದೆ. ಆ ಮುಖೇನ ಮಹಿಳೆಯರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಾವು ಹೇಗೆ ಸಮುದಾಯದ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು ಎಂಬ ಆಶಯವನ್ನು ಉಂಟುಮಾಡಲಾಗುತಿದೆ ಎಂದರು.

ಡೇರಿ ಉಪಾಧ್ಯಕ್ಷೆ ಭಾಗ್ಯಮ್ಮ, ಸಂಘಟಕ ಕೋ.ಪು.ಗುಣಶೇಖರ್, ಕಲಾವಿದರಾದ ವೈರಮುಡಿ, ಶೇಖರ್, ನವೀನಕುಮಾರಿ, ರಾಜಣ್ಣ ಇತರರು ಹಾಜರಿದ್ದರು. ಬೀದಿ ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಸಂತೆಕಸಲಗೆರೆ ನೇತೃತ್ವದ ತಂಡ ಹಾಡುಗಳು, ಮನರಂಜನೆಯ ಮಾತುಗಳ ಮೂಲಕ ಜನಜಾಗೃತಿ ಮೂಡಿಸಿದರು.