ಚನ್ನರಾಯಪಟ್ಟಣ : ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಮತ್ತು ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಲಕ್ಷಾಂತರ ಭಕ್ತರು ಅಚಲ ನಂಬಿಕೆ ಹೊಂದಿದ್ದಾರೆ. ಇದಕ್ಕೆ ಚ್ಯುತಿ ತರುವ ಕೆಲಸ ಯಾರಿಂದಲೂ ಆಗಬಾರದೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಅನಾಮಿಕನೊಬ್ಬ ನೂರಾರು ಶವಗಳನ್ನು ಹೂತಿದ್ದೇನೆ. ಇವೆಲ್ಲವೂ ಸ್ವಾಭಾವಿಕ ಸಾವುಗಳಲ್ಲ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ತನಿಖೆ ಮುಂದುವರೆದಿರುವಾಗಲೇ ಕೆಲ ಮಾಧ್ಯಮಗಳಲ್ಲಿ ಕ್ಷೇತ್ರ ಮತ್ತು ಕ್ಷೇತ್ರದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರಗಳ ಮೂಲಕ ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಇದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಅನಾಮಿಕ ಸೂಚಿಸಿದ ಎಲ್ಲ ಜಾಗಗಳನ್ನು ಅಗೆಸಿದ್ದಾರೆ. ಯಾವ ಜಾಗದಲ್ಲೂ ಅಸ್ಥಿಪಂಜರಗಳ ಗೋಚರವಿಲ್ಲ, ಇದರಿಂದ ಈಗಾಗಲೇ ಜನಸಾಮಾನ್ಯರಿಗೆ ಅನಾಮಿಕ ಆರೋಪ ಸತ್ಯಕ್ಕೆ ದೂರವಾದದ್ದು ಎಂಬ ನಂಬಿಕೆ ಬರತೊಡಗಿದೆ. ಜನರು ಇಟ್ಟಿರುವ ನಂಬಿಕೆಯನ್ನು ಕೆಡಿಸುವ ಕೆಲಸ ಕೆಲವರಿಂದಾಗುತ್ತಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳನ್ನು ಬೆಂಬಲಿಸಿ ಪಟ್ಟಣದಿಂದ ಆ.23 ಶನಿವಾರ ಸಾವಿರಾರು ಜನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ವೀರೇಂದ್ರ ಹೆಗ್ಗೆಡೆ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ ಅವರು ಸಮಾಜಮುಖಿ ಕಾರ್ಯಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಮ್ಮ ತಾಲೂಕಿನಲ್ಲೇ ಮೂರೂವರೆ ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು ಆರ್ಥಿಕ ಭದ್ರತೆ ಸಾಧಿಸಿವೆ. ಇದರೊಂದಿಗೆ ತಾಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕ, ವೈದ್ಯಕೀಯ ಚಿಕಿತ್ಸಾ ನೆರವು ನೀಡುತ್ತಾ ಬಂದಿದೆ. ತಾಲೂಕಿನ ಹತ್ತಾರು ಕೆರೆಗಳಲ್ಲಿ ಹೂಳೆತ್ತುವ ಕಾರ್ಯದೊಂದಿಗೆ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ, ನಿರ್ಮಾಣ ಕಾರ್ಯಗಳಿಗೆ ಅನುದಾನ ಒದಗಿಸುತ್ತಾ ಬಂದಿದೆ. ಇಷ್ಟೆಲ್ಲ ಸೇವೆ ಮಾಡುತ್ತಿರುವ ಕ್ಷೇತ್ರದ ಬಗ್ಗೆ ಅಪಪ್ರಚಾರಕ್ಕೆ ಮುಂದಾಗಿರುವ ಅನಾಮಿಕನಿಗೆ ಗಲ್ಲುಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಂ.ಕೆ.ಮಂಜೇಗೌಡ, ಅಣತಿ ಆನಂದ್‌ಕುಮಾರ್, ಟೆಂಟ್ ಪ್ರಕಾಶ್, ಪ್ರೇಮ್‌ಕುಮಾರ್, ಉಮಾಶಂಕರ್ ಇದ್ದರು.
------
ಚಿತ್ರ ಶೀರ್ಷಿಕೆ 13 ಸಿಆರ್‌ಪಿ-2ಎ.
ಚನ್ನರಾಯಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎ.ಗೋಪಾಲಸ್ವಾಮಿ.