ಧರ್ಮಸ್ಥಳ ಗ್ರಾಮದಲ್ಲಿ ಜೆಸಿಬಿ ಬಳಸಿ ಶವ ಶೋಧ ನಡೆಸಿದ ಸಂದರ್ಭ.
- ಧರ್ಮಸ್ಥಳ ಶವ ಶೋಧ ಪ್ರಕರಣ
- ಅಗೆತ ಮಾಡಿ 10 ತಿಂಗಳಾದರೂ ಪಾವತಿಯಾಗಿಲ್ಲ ಬಿಲ್
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣ ಭಾರಿ ಕುತೂಹಲಕ್ಕೆ ಕಾರಣವಾಗಿ, ನಂತರ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ, ತನಿಖೆ ಶುರುವಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧನೆ ನಡೆಸಿತ್ತು. ಈ ಕಾರ್ಯದಲ್ಲಿ ದುಡಿದವರಿಗೆ ಹಣ ಪಾವತಿ ಆಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
2025 ಜು.28ರಂದು ಎಸ್‌ಐಟಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಸ್ಥಳ ಗುರುತು ಮಾಡಿತ್ತು. ಅಂದಿನಿಂದಲೇ ಎಸ್‌ಐಟಿ ತಂಡದ ಸಹಾಯಕ್ಕೆ ಕೂಲಿಯಾಳುಗಳು ದುಡಿದಿದ್ದರು. 29ರಂದು ಶೋಧ ಪ್ರಕ್ರಿಯೆ ಮಾನವ ಶ್ರಮದ ಮೂಲಕ ಶುರುವಾಯಿತು. ಆ ಬಳಿಕ ಮಣ್ಣು ಅಗೆತ ಕಷ್ಟವಾದಾಗ ಜೆಸಿಬಿ ತರಿಸಲಾಯಿತು. ಬಳಿಕ ಹಲವು ದಿನಗಳವರೆಗೂ ಮಾನವ ಶ್ರಮ ಹಾಗೂ ಜೆಸಿಬಿ ಮೂಲಕ ಕೆಲಸ ನಡೆಯಿತು.
10 ತಿಂಗಳಾದರೂ ಹಣ ಬಂದಿಲ್ಲ
ಆ.13ವರೆಗೂ ಶೋಧ ನಡೆಸಿತ್ತು. 2,3,4,5 ಪಾಯಿಂಟ್ ಹೊರತು ಪಡಿಸಿ ಉಳಿದ ಎಲ್ಲ ಪಾಯಿಂಟ್‌ನಲ್ಲೂ ಜೆಸಿಬಿ ಕೆಲಸ ಮಾಡಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. 13ನೇ ಪಾಯಿಂಟ್ ದೊಡ್ಡದಾಗಿ ಅಗೆದ ಕಾರಣ ಸಣ್ಣ ಹಾಗೂ ದೊಡ್ಡ ಎರಡು ಜೆಸಿಬಿ ಬಳಸಲಾಗಿತ್ತು. ಅಲ್ಲದೇ ಕೆಲ ದಿನಗಳಲ್ಲಿ ಜೆಸಿಬಿ ಬೇಕಾಗುತ್ತದೆ, ಬೇರೆ ಹೋಗಬೇಡಿ ಅಂತ ಜೆಸಿಬಿಯನ್ನು ಸುಮ್ಮನೆ ನಿಲ್ಲಿಸಿದ್ದರು. ಇದನ್ನು ಜೆಸಿಬಿ ಮಾಲೀಕರು ಲೆಕ್ಕ ಹಾಕದೆ ದುಡಿದ ಗಂಟೆಯನ್ನು ಮಾತ್ರ ಲೆಕ್ಕ ಹಾಕಿ ಒಟ್ಟು 71,500 ರೂ. ಬಿಲ್ ನೀಡಿದ್ದರು. ಆದರೆ ಹಣ ಇನ್ನೂ ಬರಲಿಲ್ಲ.
ಜು.28ರಂದು ಚಿನ್ನಯ್ಯನನ್ನು ಕರೆದುಕೊಂಡು ಬಂದು ಮೊದಲು ಪಾಯಿಂಟ್ ಗುರುತು ಮಾಡುವಲ್ಲಿಂದ ಆರಂಭಗೊಂಡು ಆ.13ರಂದು ಶೋಧ ಕೊನೆಗೊಳ್ಳುವವರೆಗೂ ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು. ದಿನನಿತ್ಯ 10-12 ಕಾರ್ಮಿಕರು ಎಸ್‌ಐಟಿ ತಂಡಕ್ಕಾಗಿ ದುಡಿಯುತ್ತಿದ್ದರು. ಆದರೆ ಕೂಲಿ ಕೊಟ್ಟಿಲ್ಲ. ಕಾರ್ಮಿಕರದ್ದು ಒಟ್ಟು ಎಂಬತ್ತು ಸಾವಿರಕ್ಕೂ ಅಧಿಕ ಹಣ ಬಾಕಿ ಇದೆ.
ಎಸ್‌ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲ್, ಕೂಲಿಯಾಳುಗಳನ್ನು ಕರೆತಂದ ವಾಹನ ಬಾಡಿಗೆ ಹೀಗೆ ಒಟ್ಟು ಎರಡು ಲಕ್ಷಕ್ಕೂ ಅಧಿಕ ಬಿಲ್ ಬಾಕಿಯಿದೆ.
ಪಾವತಿಯಲ್ಲಿ ಗೊಂದಲ
ಎಸ್‌ಐಟಿ ತಂಡಕ್ಕೆ ಬೇಕಾದ ಕೆಲಸಗಾರರು, ಜೆಸಿಬಿ, ಇತರ ಸಾಮಾಗ್ರಿಗಳನ್ನು ಒದಗಿಸುವ ಜವಾಬ್ದಾರಿ ಸ್ಥಳೀಯ ಧರ್ಮಸ್ಥಳ ಗ್ರಾಪಂಗೆ ವಹಿಸಲಾಗಿತ್ತು. ಅದರಂತೆ ಸ್ಥಳೀಯ ಗ್ರಾಪಂ ಎಸ್‌ಐಟಿ ತಂಡದ ನಿರ್ದೇಶನದಂತೆ ಸೌಲಭ್ಯ ಒದಗಿಸಿದ್ದರು. ಆದರೆ ಪಂಚಾಯಿತಿ ಹಣವನ್ನು ಎಸ್‌ಐಟಿ ಕೆಲಸಕ್ಕೆ ಭರಿಸುವಂತಿಲ್ಲ ಎನ್ನಲಾಗಿದೆ. ಇದನ್ನು ಎಸ್‌ಐಟಿ ಟೀಂ ಭರಿಸಬೇಕು. ಹೀಗಾಗಿ ಬಾಕಿ ಬಿಲ್ ಯಾರಲ್ಲಿ ಕೇಳುವುದು ಎನ್ನುವ ಗೊಂದಲವಿದೆ.
ಬಿಲ್ ಪಾವತಿ ಉಳಿಕೆ ಮಾಹಿತಿ ಇಲ್ಲ. ಪರಿಶೀಲನೆ ನಡೆಸಲಾಗುವುದು. ನಾವು ತನಿಖೆ ಮಾತ್ರ ಮಾಡಿದ್ದೇವೆ.
— ಪ್ರಣವ್ ಮೊಹಾಂತಿ, ಎಸ್‌ಐಟಿ ತಂಡ ಮುಖ್ಯಸ್ಥ
ಈ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಿದ ಸರ್ಕಾರವೇ ಅನುದಾನ ನೀಡುತ್ತದೆ. ನಮ್ಮ ಇಲಾಖೆ ಕಾರ್ಯಾಚರಣೆಯ ಭಾಗವಾಗಿ ಕೆಲಸ ನಿರ್ವಹಿಸಿತ್ತು.
— ಸ್ಟೆಲ್ಲಾ ವರ್ಗೀಸ್ ಅಸಿಸ್ಟೆಂಟ್ ಕಮೀಷನರ್, ಪುತ್ತೂರು.