ವಿಜಯವಾಣಿ ಸುದ್ದಿಜಾಲ ಉಡುಪಿ
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಕೆಲವು ಯೂಟ್ಯೂಬರ್ಗಳ ಅಪಪ್ರಚಾರದಿಂದ ಹಿಂದು ಧಾರ್ಮಿಕ ಕೇಂದ್ರದ ಮೇಲಿರುವ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ. ಅವರ ಕುಕೃತ್ಯದ ಹಿಂದೆ ವಿದೇಶಿ ಹಣ ಹರಿದು ಬಂದಿರುವ ಗುಮಾನಿಯಿದ್ದು, ಕೇಂದ್ರ ಸರ್ಕಾರ ಇ.ಡಿ. ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಆಗಸ್ಟ್ 19ರಂದು ಪತ್ರ ಬರೆದು ವಿನಂತಿಸಿದ್ದಾರೆ.
ಮಂಜುನಾಥ ಸ್ವಾಮಿ ದೇಗುಲದ ವಿರುದ್ಧ ಭಾರಿ ಷಡ್ಯಂತ್ರ ನಡೆದಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಯೇ ಬಹಿರಂಗ ಹೇಳಿಕೆ ನೀಡಿದ್ದು, ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಂತ್ರಿಗಳೂ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರವೂ ಸಹ ಅನಾಮಧೇಯ ಆರೋಪಿಯ ಮಾತು ನಂಬಿ ಎಸ್ಐಟಿ ಮೂಲಕ ಆತ ಕೈ ತೋರಿಸಿದೆಡೆಯೆಲ್ಲ ಹೊಂಡ ತೋಡಿ ಅಸ್ತ್ತಿಪಂಜರ ಇದಯೇ ಎಂದು ನೋಡಿ ಗೊಂದಲ ನಿರ್ಮಿಸಿದೆ. ಹಿಂದುಗಳ ಆರಾಧ್ಯ ದೈವ ಬಾಹುಬಲಿ ಬೆಟ್ಟದ ಬುಡಕ್ಕೂ ಜೆಸಿಬಿ ನುಗ್ಗಿಸಿ ಭಕ್ತರು ಕಂಗಾಲಾಗುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.