ಮೈಸೂರು: ಧರ್ಮಸ್ಥಳದ ವಿಚಾರದಲ್ಲಿ ಎದ್ದಿರುವ ಅನುಮಾನಗಳು ಪರಿಹಾರವಾಗಬೇಕು. ಇಲ್ಲದೆ ಹೋದರೆ ಯಾವಾಗಲೂ ಧರ್ಮಸ್ಥಳದ ಮೇಲೆ ತೂಗುಗತ್ತಿ ಇದೇ ಇರುತ್ತದೆ. ಹಾಗಾಗಿ ಸತ್ಯ ಹೊರಬರಲಿ ಎಂಬ ಕಾರಣಕ್ಕೆ ಎಸ್‌ಐಟಿ ರಚಿಸಲಾಗಿದೆ. ಬಿಜೆಪಿಯವರು ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಹೋದರೆ ಹೋಗಲಿ. ಎಸ್‌ಐಟಿ ರಚನೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರ ಬರಬೇಕೆಂಬ ಕಾರಣದಿಂದ ಎಸ್‌ಐಟಿ ರಚನೆ ಮಾಡಲಾಗಿದೆ. ಆರಂಭದಲ್ಲಿ ಬಿಜೆಪಿ ಸಹ ಎಸ್‌ಐಟಿಯನ್ನು ಸ್ವಾಗತಿಸಿತ್ತು. ಆದರೆ, ಇದೀಗ ರಾಜಕೀಯ ಕಾರಣಕೋಸ್ಕರ ವಿರೋಧಿಸುತ್ತಿದ್ದಾರೆ ಎಂದರು.
ಧರ್ಮಸ್ಥಳದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಇದಕ್ಕೆ ಪ್ರತ್ಯೇಕ ತನಿಖೆಯ ಅವಶ್ಯಕತೆ ಇಲ್ಲ. ಬಿಜೆಪಿಯವರು ಇದ್ದಾಗ ಎಷ್ಟು ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಎಸ್‌ಐಟಿ ತನಿಖೆಗೆ ನಾವು ಯಾವುದೇ ರೀತಿಯ ಕಾಲಮಿತಿ ನಿಗದಿ ಮಾಡಿಲ್ಲ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಿಎಸ್‌ಟಿ ಎರಡು ಸ್ಲಾೃಬ್ ಮಾಡುವುದರಿಂದ ಪ್ರತಿ ವರ್ಷ 15 ಸಾವಿರ ಕೋಟಿ ರೂ. ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ. ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಹಣಕಾಸಿನ ರಕ್ಷಣೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಬಿಜೆಪಿಯೇತರ ಎಂಟು ರಾಜ್ಯಗಳು ದೆಹಲಿಯಲ್ಲಿ ಚರ್ಚೆ ನಡೆಸಿದೆ ಎಂದರು.
ಲಕ್ಷುರಿ(ಸಿನ್‌ಗೂಡ್ಸ್) ವಸ್ತುಗಳಾದ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಂಜ್‌ಕಾರುಗಳಲ್ಲಿ ಓಡಾಡುವವರ ಮೇಲೆ ಸೆಸ್ ಹಾಕಿ ನಮಗೆ ಪರಿಹಾರ ಕೊಡಿ ಎಂದು ಸಲಹೆ ನೀಡಿದ್ದೇವೆ. ಸಚಿವ ಕೃಷ್ಣಭೈರೇಗೌಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೇ ಈಗ ಎಂಟು ರಾಜ್ಯಗಳ ಆರ್ಥಿಕ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸೆ.3, 4 ರಂದು ನಡೆಯಲಿರುವ ಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದರು.
ಜಿಎಸ್‌ಟಿ ವಿಚಾರವಾಗಿ ರಾಜ್ಯದ ಸಚಿವರು ಹಾಗೂ ಸಂಸದರು ನಿಯೋಗ ತೆರಳುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಸಂಸದರು ಎಂದಿಗೂ ಇದನ್ನು ಒತ್ತಾಯಿಸುವುದಿಲ್ಲ. ಕರ್ನಾಟಕಕ್ಕೆ ಆಗಿರುವ ನಷ್ಟದ ಕುರಿತು ಅವರು ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ತಿ ನೋಂದಣಿ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮಾನವಾಗಿ ಶೇ. ಒಂದರಷ್ಟನ್ನು ಹೆಚ್ಚಿಸಲಾಗಿದೆ ಎಂದರು.