ಜಿಲ್ಲೆ

ಧರ್ಮಸ್ಥಳ ಅವಹೇಳನ ಖಂಡಿಸಿ ಪ್ರತಿಭಟನೆ, ಧಾರವಾಡದಲ್ಲಿ ಮೌನ ಮೆರವಣಿಗೆ

Dharwada - Basavaraj Idli

ಹುಬ್ಬಳ್ಳಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರ್ಮಸ್ಥಳ ಭಕ್ತ ವೃಂದದ ವತಿಯಿಂದ ಆ. 11ರಂದು ಬೆಳಗ್ಗೆ 11ಕ್ಕೆ ಧಾರವಾಡದಲ್ಲಿ ಬೃಹತ್ ಮೌನ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ, ತನಿಖೆ ಹೆಸರಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅವಹೇಳನ ಸಹಿಸುವುದಿಲ್ಲ. ಮೌನ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಧರ್ಮ ಉಳಿಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಧಾರವಾಡ ಕಲಾಭವನದಿಂದ ಮೆರವಣಿಗೆ ಆರಂಭವಾಗಿ ಜುಬಿಲಿ ಸರ್ಕಲ್, ಕೋರ್ಟ್ ಸರ್ಕಲ್, ತಹಸೀಲ್ದಾರ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಲ್ಲಿ ಸಮಾವೇಶಗೊಳ್ಳಲಿದೆ. ನಂತರ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ಭಾಷೆಯಲ್ಲಿ ವಿಡಿಯೋ ತುಣುಕುಗಳನ್ನು ಹರಿಬಿಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಮೇಲೆ ದೂರು ದಾಖಲಿಸಿಕೊಂಡು, ಅವರನ್ನೂ ಕೂಡ ತನಿಖೆಗೆ ಒಳಪಡಿಸಬೇಕು ಎಂದು ಕೊರವಿ ಒತ್ತಾಯಿಸಿದರು.

ತನಿಖೆಯಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಲಿ. ಆದರೆ, ಯಾವುದೇ ದಾಖಲೆ ಇಲ್ಲದೇ ಕೆಲ ಧರ್ಮ ವಿರೋಧಿಗಳು ನೀಡುತ್ತಿರುವ ಹೇಳಿಕೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದರು.

ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ವಸಂತ ಅರ್ಕಾಚಾರ, ತಾರಾದೇವಿ ವಾಲಿ, ಫೀರಾಜೆ ಖಂಡೇಕರ, ಮಾರುತಿ ಶೇಟ್, ಸ್ವಪ್ನಾ ಹಿರೇಮಠ ಇತರರು ಗೋಷ್ಠಿಯಲ್ಲಿದ್ದರು.