ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೆಗ್ಗಡೆಯವರಾಗಿ 50 ವರ್ಷ ಸಂದ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಸಮಿತಿ ಸಿದ್ಧಪಡಿಸಿದ ಅಭಿನಂದನಾ ಗ್ರಂಥ (ಧರ್ಮಯಾನ)ವನ್ನು ಸಮಿತಿ ಅಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್ ದಂಪತಿ ಹೆಗ್ಗಡೆಯವರಿಗೆ ಸಮರ್ಪಿಸಿದರು.
ಈ ಸಂದರ್ಭ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕ್ಷೇತ್ರ ಪರಂಪರಾಗತವಾಗಿ ಕಟ್ಟುಕಟ್ಟಳೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ ಜನಸಾಮಾನ್ಯರೊಂದಿಗೆ ಬೆರೆತುಕೊಂಡಿದೆ. ಆದ್ದರಿಂದ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ನಾನು ಮಾಡಿರುವ ಹೆಚ್ಚಿನ ಕೆಲಸಗಳು, ನನಗೆ ಪರಂಪರೆಯಿಂದ ಬಂದವುಗಳು. ಆದರೂ ಕೆಲವನ್ನು ಅನುಭವದ ಆಧಾರದಲ್ಲಿ ಜಾರಿಗೆ ತರಲು ಸಾಧ್ಯವಾಗಿದೆ ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಯಶೋವರ್ಮ ಕೃತಿಯ ಮಾಹಿತಿ ನೀಡಿದರು. 750 ಪುಟಗಳ ಗ್ರಂಥದಲ್ಲಿ 180 ಬಿಡಿ ಲೇಖನಗಳಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ಮೋದಿಯವರ ಸಂದೇಶಗಳಿವೆ. ಹೆಗ್ಗಡೆಯವರನ್ನು ದೀರ್ಘಕಾಲ ಕಂಡ ಅನೇಕ ದಾರ್ಶನಿಕರು, ಧಾರ್ಮಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸ್ವಾತಂತ್ರೃ ಹೋರಾಟಗಾರರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ವಿವೇಕ್ ರೈ, ಜಾನಪದ ವಿವಿ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ತಾಳ್ತಜೆ ವಸಂತ ಕುಮಾರ್ ಅವರನ್ನು ಒಳಗೊಂಡ ಸಂಪಾದಕ ಮಂಡಳಿ ಕೃತಿಯನ್ನು ವಿಮರ್ಶಿಸಿದ್ದಾರೆ. ಸುವರ್ಣ ಸಮಿತಿ ಸಂಚಾಲಕ ಶ್ರೀನಾಥ್ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಮ್ಮ ನಂಬಿಕೆ ಮತ್ತು ಆಶಯದ ಮೂಲ ಕೇಂದ್ರವಾಗಿಟ್ಟು ಧಾರ್ಮಿಕ ಕೇಂದ್ರ ಹೇಗೆ ಜನಸಾಮಾನ್ಯರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸಬಹುದು ಎಂಬುದನ್ನು ಡಾ.ಹೆಗ್ಗಡೆಯವರು ತೋರಿಸಿಕೊಟ್ಟಿದ್ದಾರೆ.
ಡಾ.ಯಶೋವರ್ಮ, ಕಾರ್ಯದರ್ಶಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು