ಜಿಲ್ಲೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ ಬದಲಾವಣೆ

ಉಡುಪಿ: ಎಸ್​ಐಟಿ ತನಿಖೆ ಮುಗಿಯುವ ಮುನ್ನವೇ ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ಮಾಡುವುದು ಸಲ್ಲದು. ಧರ್ಮಸ್ಥಳ ಸಂಸ್ಥೆಯಿಂದ ಜಿಲ್ಲೆಗೆ ಬಹಳಷ್ಟು ಕೊಡುಗೆಗಳು ಲಭಿಸಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ, ಆರ್ಥಿಕ ಬದಲಾವಣೆಗಳಾಗಿವೆ. ದೇವಸ್ಥಾನ, ದೈವಸ್ಥಾನಗಳ ಜೀಣೋರ್ದ್ಧಾರಕ್ಕೆ ಕ್ಷೇತ್ರದ ಕೊಡುಗೆ ಅಪಾರವಿದೆ ಎಂದು ಮಾಜಿ ಶಾಸಕ ಕೆ. ರುಪತಿ ಭಟ್​ ಹೇಳಿದರು.

ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಕಳಂಕ ತರುವ ಒಳಸಂಚಿನ ವಿರುದ್ಧ ಸೂಕ್ತ ತನಿಖೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕುಂದಾಪುರ ಶಾಸಕ ಕಿರಣ್​ ಕುಮಾರ್​ ಕೊಡ್ಗಿ ಮಾತನಾಡಿ, ಎಸ್​ ಐಟಿ ತನಿಖೆಯ ದಿಕ್ಕನ್ನು ತಪ್ಪಿಸಲು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿವೆ. ತನಿಖೆಯಾಗಿ ಸತ್ಯಾಂಶ ಹೊರಬರಲಿ. ಆದರೆ ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸವನ್ನು ಯಾರು ಮಾಡಬಾರದು. ಈ ಬಗ್ಗೆ ಹಿಂದೂಗಳು ಒಗ್ಗಟ್ಟಿಂದ ಹೋರಾಟ ನಡೆಸಬೇಕು ಎಂದು ಕರೆನೀಡಿದರು.

ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಜಿಲ್ಲಾಧ್ಯಕ್ಷ ನೀರೆ ಕೃಷ್ಣ್ಣ ಶೆಟ್ಟಿ, ಮುಖಂಡರಾದ ಬೈಕಾಡಿ ಸುಪ್ರಸಾದ್​ ಶೆಟ್ಟಿ, ಮಹೇಶ್​ ಠಾಕೂರ್​, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಶೆಟ್ಟಿ ಕುತ್ಯಾರು ಮೊದಲಾದವರು ಉಪಸ್ಥಿತರಿದ್ದರು.

ಕಮುನಿಷ್ಟ್​ ಮಾನಸಿಕತೆಯ ಕೆಲವು ವ್ಯಕ್ತಿಗಳು ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳ ದೇವಸ್ಥಾನದ ಬಗ್ಗೆ ಸುಳ್ಳು ಪ್ರಚಾರ ಮಾಡವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಸರಿಯಾದ ಉತ್ತರವನ್ನು ಕೊಡುತ್ತೇವೆ. ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್​ ಸೆಂಥಿಲ್​ ಅವರು ಚುನಾವಣೆ ಸಂದರ್ಭದಲ್ಲಿ ಹಿಂದೂ ಸಮಾಜದ ಒಗ್ಗಟ್ಟು ಒಡೆಯಲು ಕೆಲಸ ಮಾಡಿದ್ದರು. ಅವರನ್ನು ತನಿಖೆಗೆ ಒಳಪಡಿಸಿ, ಸತ್ಯಾಂಶವನ್ನು ಹೊರತೆಗೆಯುವ ಕೆಲಸ ಮಾಡಬೇಕು. ಯಶ್​ ಪಾಲ್​ ಸುವರ್ಣ, ಶಾಸಕರು, ಉಡುಪಿ