ಜಿಲ್ಲೆ

ಧರ್ಮಸ್ಥಳ ಸಂರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ,  ಷಡ್ಯಂತ್ರದ ವಿರುದ್ಧ ಕಹಳೆ ಮೊಳಗಿಸಿದ ಮಹಿಳೆಯರು

Dharwada - Basavaraj Idli

ಹುಬ್ಬಳ್ಳಿ: ಧರ್ಮಸ್ಥಳ ನಂಬಿಕೆಯ ನಿಲಯ ಸಂಸ್ಕೃತಿಯ ತಾಣ, ಧರ್ಮೋ ರಕ್ಷತಿ ರಕ್ಷಿತಃ, ಧರ್ಮವೇ ನಮ್ಮ ದಿಕ್ಕು ನೈತಿಕತೆಯೇ ನಮ್ಮ ಬಲ, ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ, ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ವಿರೋಧ ಹೇಳಿಕೆ ನೀಡುವವರಿಗೆ ಧಿಕ್ಕಾರ, ಜೈ ಧರ್ಮಸ್ಥಳ…

ಹೀಗೆ ಹತ್ತಾರು ಘೋಷಣೆಗಳ ಮೂಲಕ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ನೂರಾರು ಮಹಿಳೆಯರು, ಸಾರ್ವಜನಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸುಕ್ಷೇತ್ರ ಧರ್ಮಸ್ಥಳ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಸ್ಟೇಷನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ ಮೂಲಕ ಇಂದಿರಾ ಗಾಜಿನ ಮನೆ ಆವರಣ ತಲುಪಿತು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಧರ್ಮಸ್ಥಳದ ಅನೇಕ ಭಕ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದು ಧರ್ಮಕ್ಷೇತ್ರದ ಮೇಲೆ ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿದರು.

ಮಹಿಳೆಯರು ಭಿತ್ತಿಪತ್ರ, ಲಕಗಳನ್ನು ಹಿಡಿದುಕೊಂಡು ಷಡ್ಯಂತ್ರದ ವಿರುದ್ಧ ಗಟ್ಟಿಧ್ವನಿಯ ಕಹಳೆ ಮೊಳಗಿಸಿದರು.

ಪ್ರತಿಭಟನಾ ಸಭೆ:
ನಗರದ ಇಂದಿರಾ ಗಾಜಿನಮನೆಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲಿ ಅವರು, ಸುಮಾರು 55 ವರ್ಷಗಳ ಕಾಲ ಯಾವುದೇ ಜಾತಿ, ಧರ್ಮ, ಸಮುದಾಯವನ್ನು ನೋಡದೇ ನನ್ನ ಸಮಾಜ ಹೀಗಿರಬೇಕು ಎಂದು ಕನಸು ಕಂಡು ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸಿದ ಧರ್ಮಾಧಿಕಾರಿಗಳ ಬಗ್ಗೆ ಜಾಲತಾಣದಲ್ಲಿ ಕೆಟ್ಟದಾಗಿ ಮಾತನಾಡಿದಾಗಲೂ ಹಿಂದುಗಳಾಗಿ ಸುಮ್ಮನಿದ್ದೇವಲ್ಲ ಎಂಬುದೇ ಬೇಸರದ ಸಂಗತಿ. ತಡವಾಗಿಯಾದರೂ ಸಮಾಜ ಎಚ್ಚೆತ್ತುಕೊಂಡಿದೆ. ಇದು ಇಲ್ಲಿಗೆ ನಿಲ್ಲಬಾರದು. ಯಾವುದೇ ಸಂದರ್ಭದಲ್ಲಿ ಹಿಂದು ಧರ್ಮ ಕೇಂದ್ರಗಳ ಬಗ್ಗೆ ಅಪಪ್ರಚಾರ ಮಾಡಿದಾಗ ತಿರುಗಿ ಬೀಳಬೇಕು ಎಂದು ಹೇಳಿದರು.

ಯಾರೋ ಒಬ್ಬ ಯೋಗ್ಯತೆ ಇಲ್ಲದವ ಆರೋಪ ಮಾಡುತ್ತಾನೆ ಎಂದರೆ ಕನಿಷ್ಠ ಅವನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಈ ವಿಚಾರದಲ್ಲಿ ಎಸ್ಐಟಿ ರಚಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ. ಯಾವುದೇ ಒಂದು ಜಾಗದಲ್ಲಿಯೂ ಕುರುಹು ಸಿಗಲಿಲ್ಲ. ಇದರಿಂದ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಯವರು ಪುಟಕ್ಕಿಟ್ಟ ಚಿನ್ನದಂತೆ ಎಲ್ಲದರಿಂದ ಮುಕ್ತರಾಗಿದ್ದಾರೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಅಪರೂಪದ ವ್ಯಕ್ತಿ. ದೇಶದಲ್ಲಿ ಯಾರೂ ಮಾಡದಷ್ಟು ಸಮಾಜ ಸೇವಾ ಕೆಲಸಗಳನ್ನು ಅವರು ಮಾಡಿದ್ದಾರೆ. 6.5 ಲಕ್ಷ ಸ್ವಸಹಾಯ ಸಂಘಗಳನ್ನು ರಚಿಸಿ ಎಲ್ಲ ಧರ್ಮಿಯರೂ ಅದರ ಲಾಭ ಪಡೆಯುವಂತೆ ಮಾಡಿದರು, ರಾಜ್ಯದ 12 ಸಾವಿರ ದೇವಸ್ಥಾನಗಳನ್ನು ಅವರು ಜೀರ್ಣೋದ್ಧಾರ ಮಾಡಲು ಸಹಾಯ ಮಾಡಿದರಲ್ಲ ಆಗ ಅವರು ಜೈನ್ ಧರ್ಮಿಯರು ಅನಿಸಲಿಲ್ಲವೇ? ಇಂತಹ ಭೇದಗಳನ್ನು ಹುಟ್ಟು ಹಾಕಿ ಹಿಂದು ಧರ್ಮ ಒಡೆಯುವ ಕೆಲಸ ಮಾಡುವವರ ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಎನ್ಐಎ ತನಿಖೆ ನಡೆಸಿ:
ಹಿಂದು ಧರ್ಮ ನಾಶ ಮಾಡಬೇಕೆಂಬ ಷಡ್ಯಂತ್ರ ಇದರ ಹಿಂದೆ ಅಡಗಿದೆ. ಈ ಷಡ್ಯಂತ್ರದ ಭಾಗವಾಗಿರುವವರು ಯಾರೆಂಬುದು ಹೊರಗೆ ಬರಬೇಕು. ಇದಕ್ಕಾಗಿ ಎನ್ಐಎ ಅಥವಾ ಯಾವುದಾದರೂ ಕೇಂದ್ರಿಯ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು ಎಂದು ಸೂಲಿಬೆಲೆ ಆಗ್ರಹಿಸಿದರು.

ಸಮಿತಿ ಸಂಚಾಲಕ ಸುಭಾಸಸಿಂಗ್ ಜಮಾದಾರ ಮಾತನಾಡಿ, ಬುರುಡೆ ಹಿಡಿದುಕೊಂಡು ಬಂದು ಅಪಪ್ರಚಾರ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಹಿಂದು ಶ್ರದ್ಧಾ ಕೇಂದ್ರಗಳನ್ನು ಅಪವಿತ್ರ ಮಾಡಿದ ಬ್ರಿಟಿಷರಂತೆ ಇಂದಿನ ಅರ್ಬನ್ ನಕ್ಸಲೈಟ್ಸ್ ಮಾಡುತ್ತಿದ್ದಾರೆ. ಈ ಷಡ್ಯಂತ್ರದ ಹಿಂದೆ ಕೆಲ ಮಿಶಿನರಿಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಉದ್ಯಮಿ ಮಹದೇವ ಕರಮರಿ ಮಾತನಾಡಿ, ಧರ್ಮಸ್ಥಳವು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಧರ್ಮಾಧಿಕಾರಿ ಮಾಡುತ್ತಿದ್ದಾರೆ. ಅಂತಹ ಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಒಕ್ಕೋರಲ ಧ್ವನಿ ಎತ್ತಬೇಕಾಗಿದೆ ಎಂದರು.

ಗೌತಮ ಬಾಣಾ ಸ್ವಾಗತಿಸಿದರು.
ರಾಜಣ್ಣ ಕೊರವಿ, ಸಂದೀಪ ಬೂದಿಹಾಳ, ವೆಂಕಟೇಶ ಕಾಟವೆ, ವಿಮಲ ತಾಳಿಕೋಟಿ, ಅನಂತ ಪದ್ಮನಾಭ ಐತಾಳ, ವಿಜಯಾನಂದ ಶೆಟ್ಟಿ, ಬಂಟ ಸಮಾಜ, ಮೊಗವೀರ, ದಕ್ಷಿಣ ಕನ್ನಡ ಬ್ರಾಹ್ಮಣ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.