ಮಂಡ್ಯ: ಹಿಂದಿನ ಜನ್ಮಗಳ ಪುಣ್ಯದ ಫಲದಿಂದ ಜಗತ್ತಿನಲ್ಲಿರುವ ಹಲವಾರು ಜೀವರಾಶಿಗಳ ಪೈಕಿ ಮನುಷ್ಯ ಎತ್ತರದ ಸ್ಥಾನದಲ್ಲಿದ್ದಾನೆ. ಆದರೆ ಜಗತ್ತಿನ ಸುಖದ ಮೋಹಕ್ಕೆ ಸಿಲುಕಿದ್ದಾನೆ. ಮನುಷ್ಯ ಜೀವಿಯೊಳಗೆ ಇರುವ ಸತ್ಯವನ್ನು ಅರಿಯಲು ಮೋಹವನ್ನು ತ್ಯಜಿಸಬೇಕಾದ ಅನಿವಾರ್ಯತೆ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಕಲ್ಲಹಳ್ಳಿ ಗ್ರಾಮದಲ್ಲಿ ಮಂಚಮ್ಮ ದೇವರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮ ಪ್ರವಚನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಹಲವು ಜೀವರಾಶಿಗಳ ಪೈಕಿ ಮನುಷ್ಯನನ್ನು ಹೊರತುಪಡಿಸಿ ಉಳಿದ ಜೀವಿಗಳ ದೇಹಗಳು ಭೋಗಕ್ಕೋಸ್ಕರ ಜೀವನ ನಡೆಸುತ್ತದೆ. ಅದು ಅಜ್ಞಾನದ ಫಲ, ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯನ ಜೀವ ಸೃಷ್ಠಿ ವಿಕಾಸದ ಪ್ರಕ್ರಿಯೆ ಹಾಗೂ ವಿಜ್ಞಾನದ ವಿಕಾಸದ ಪ್ರಕ್ರಿಯೆಯಲ್ಲಿ ಉನ್ನತ ಹಂತ ತಲುಪಿದೆ. ಇದು ಹಲವು ಜನ್ಮಗಳ ಪುಣ್ಯವನ್ನು ಅಡವಿಟ್ಟು ಪಡೆದಿರುವ ಫಲವಾಗಿದೆ ಎಂದು ವಿವರಿಸಿದರು.
ಇಂತಹ ಪುಣ್ಯದ ಮನುಷ್ಯ ಜನ್ಮವನ್ನು ಪ್ರಾಣಿಗಳ ರೀತಿಯಲ್ಲೇ ಭೋಗದ ಜೀವನಕ್ಕೆ ಮೀಸಲಾಗಿಟ್ಟರೇ ವ್ಯತ್ಯಾಸವೇನು ಎಂದು ಪ್ರಶ್ನಿಸಿದ ಅವರು, ಮನುಷ್ಯ ಜನ್ಮವನ್ನು ನೀಡಿರುವ ಪರಮಾತ್ಮನನ್ನು ಸದಾಕಾಲ ಸ್ಮರಿಸುವ ಗುಣ ಹೊಂದಿರಬೇಕಿದೆ. ಮನುಷ್ಯ ಅಲ್ಪ ಗುರಿ ಮತ್ತು ಸಾಧನೆಗೆ ತೃಪ್ತಿ ಹೊಂದದೇ ಉನ್ನತ ಗುರಿ ಮತ್ತು ಸಾಧನೆಯ ಹಂಬಲ ಹೊಂದಬೇಕು. ಚಿನ್ನಕ್ಕಿಂತ ವಜ್ರ ಶ್ರೇಷ್ಠವೆಂಬ ಅರಿವಿನಂತೆ ನಮ್ಮ ಶ್ರದ್ಧೆ ಮತ್ತು ಗುರು ಉನ್ನತವಾಗಿರಬೇಕು. ಕ್ಲೇಶದಿಂದ ಕೂಡಿರುವ ನಮ್ಮ ಮನಸ್ಸನ್ನು ಶುದ್ದಿಕರಿಸಲು ದೇವರ ಮೊರೆ ಹೋಗಬೇಕು ಎಂಬ ಅಭಿಲಾಷೆಯಿಂದ ನಮ್ಮ ಹಿರಿಯರು ಹಲವು ಪರಂಪರೆಯನ್ನು ನಮಗೆ ಕರುಣಿಸಿದ್ದಾರೆ. ನಮ್ಮ ಮನಸ್ಸು ಎಲ್ಲವನ್ನು ಬೇಗ ಮರೆಯುವ ಗುಣ ಹೊಂದಿದ್ದು ಜನ್ಮ ನೀಡಿದ ತಂದೆ, ತಾಯಿಗಳನ್ನು ಸಹಾಯ ಮಾಡಿದವರನ್ನು ಮರೆಯುತ್ತೇವೆ, ಇದೇ ರೀತಿ ಮನುಷ್ಯ ಜನ್ಮ ಕರುಣಿಸಿದ ಭಗವಂತನನ್ನು ಮರೆಯಬಾರದೆಂಬ ದೃಷ್ಠಿಯಿಂದ ನಮ್ಮ ಅಹಂ ತಗ್ಗಿಸಲು ದೇವಾಲಯಗಳನ್ನು ನಮ್ಮ ಪೂರ್ವಿಕರು ನಿರ್ಮಿಸಿ ಹೋಗಿದ್ದಾರೆಂದು ತಿಳಿಸಿದರು.
ನಮ್ಮ ಬದುಕು ಚೆನ್ನಾಗಿರಲು ಗಾಳಿ, ನೀರು, ಬೆಳಕು, ಆಹಾರ ನೀಡಿರುವ ದೇವರಿಗೆ ಧನ್ಯವಾದ ಹೇಳಿದರೆ ಮತ್ತಷ್ಟನ್ನು ಕರುಣಿಸುತ್ತಾನೆ ಎಂಬ ಭಾವನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಸಂಪತ್ತು ಮತ್ತು ಜ್ಞಾನ ಬಂದ ವೇಳೆ ಅಹಂಕಾರ ಬಂದರೆ ಕೃತಜ್ಞರಾದರೆ, ಜ್ಞಾನಿಯಾಗದಿದ್ದರೆ ಭಗವಂತ ಮನಸ್ಸು ಹಾಗೂ ಬುದ್ದಿಯನ್ನು ಕೆಡಿಸುತ್ತಾನೆಂಬ ಅರಿವು ನಮ್ಮೆಲ್ಲರಿಗಿರಬೇಕು. ಕಲ್ಲಹಳ್ಳಿ ಗ್ರಾಮಸ್ಥರು ನೂತನವಾಗಿ ಮಂಚಮ್ಮ ದೇವಿ ದೇವಾಲಯ ನಿರ್ಮಾಣ ಮಾಡಿ ಲೋಕಾರ್ಪಣೆಗೊಂಡ ನಂತರ 48 ದಿನದ ಮಂಡಲ ಪೂಜೆ ನೆರವೇರಿಸಿದ್ದೀರಿ. ಅದೇ ರೀತಿ ದೇವಿಯ ಮುಂದೆ ಮನಸ್ಸನ್ನು ಶುದ್ದಗೊಳಿಸುವ ರೀತಿಯಲ್ಲಿ ಜೀವನ ನಡೆಸಬೇಕು. ನಮ್ಮ ಮನಸ್ಸಿನಲ್ಲಿರುವ ಹಲವು ಆಲೋಚನೆಗಳನ್ನು ನಿಯಂತ್ರಿಸಿ ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಸದಸ್ಯರಾದ ರವಿ, ಶಿವಲಿಂಗು, ಪತ್ರಕರ್ತರಾದ ಕೆ.ಸಿ.ಮಂಜುನಾಥ್, ಸಿ.ಎನ್.ಮಂಜುನಾಥ್, ಮುಖಂಡ ಕೆ.ಗುರುಸ್ವಾಮಿ, ಮಂಚಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ರಾಮಲಿಂಗಯ್ಯ, ಗೌರವಾಧ್ಯಕ್ಷ ಕೆ.ಎಲ್.ಶಿವರುದ್ರ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ, ಕಾರ್ಯದರ್ಶಿ ಕೆ.ಸಿ.ರವೀಂದ್ರ, ಟ್ರಸ್ಟಿಗಳಾದ ಕೆ.ಎಂ.ಉಮೇಶ್, ಕಿರಣ್ ಇತರರಿದ್ದರು. ಇದೇ ವೇಳೆ ಆದಿಚುಂಚನಗಿರಿ ಮಠದ ಸಾಯಿ ಕೀರ್ತಿಜೀ ಮತ್ತು ಗಾಯಕ ಶಿವಾರ ಉಮೇಶ್ ತಂಡ ಭಕ್ತಿಗೀತೆಗಳನ್ನು ಹಾಡಿದರು.