ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಡುಬಿದಿರೆ ತಾಲೂಕಿನ ಧಾರಿಣಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಸುಬ್ರಹ್ಮಣ್ಯ ಪ್ರೌಢಶಾಲೆಯಲ್ಲಿ ಭಾನುವಾರ ನಡೆಯಿತು.
ದ.ಕ. ಹಾಲು ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಜ್ಞಾನ ವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಆದ ಸಕಾರಾತ್ಮಕ ಬದಲಾವಣೆ ಮತ್ತು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಶಿಕ್ಷಕಿ, ಸಾಹಿತಿ ಅನಿತಾ ಶೆಟ್ಟಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು. ಯೋಜನಾಧಿಕಾರಿ ಧನಂಜಯ, ಪ್ರೌಢಶಾಲೆಯ ಶಿಕ್ಷಕ ದಿನಕರ್ ಕುಂಭಷಿ, ಒಕ್ಕೂಟದ ಅಧ್ಯಕ್ಷೆ ರೇವತಿ ಉಪಸ್ಥಿತರಿದ್ದರು. ಸಂಪಿಗೆ ವಲಯದ ಅಧ್ಯಕ್ಷ ಸುಕೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. 11 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು. ಕೇಂದ್ರದ ಸದಸ್ಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜೇಶ್ವರಿ ಅನಿಸಿಕೆ ವ್ಯಕ್ತಪಡಿಸಿದರು.
ಸಂಯೋಜಕಿ ಜ್ಯೋತಿ ವರದಿ ವಾಚಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಆಶಾ ಸ್ವಾಗತಿಸಿದರು. ಸೇವಾಪ್ರತಿನಿಧಿ ವಸಂತಿ ವಂದಿಸಿದರು.