ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಿAದ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ. 5ರಿಂದ 30ರವರೆಗೆ ಭಾನುವಾರ ಹೊರತುಪಡಿಸಿ ನಾಡು ಶ್ರೀಮಂತಗೊಳಿಸಿದವರನ್ನು ಯುವ ಪೀಳಿಗೆಗೆ ಪರಿಚಯಿಸುವ `ಧರೆಗೆ ದೊಡ್ಡವರು' ಎಂಬ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಸಂಘದ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ 5ರಂದು ಬೆಳಗ್ಗೆ 10.30ಕ್ಕೆ ಹಿರಿಯ ವಿಮರ್ಶಕ ಡಾ. ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸುವರು. ನ. 6ರಿಂದ 30ರವರೆಗೆ ಪ್ರತಿದಿನ 10.30ಕ್ಕೆ ಕನ್ನಡ ನಾಡು- ನುಡಿಗೆ ಕೊಡುಗೆ ನೀಡಿದ ಸಾಧಕರೊಬ್ಬರನ್ನು ಪರಿಚಯಿಸುವ `ಧರೆಗೆ ದೊಡ್ಡವರು' ಕಾರ್ಯಕ್ರಮ ನಡೆಯಲಿದೆ ಎಂದರು.
ನ. 20ರಿಂದ 29ರವರೆಗೆ ಸಂಜೆ 5 ಗಂಟೆಗೆ ನಾಟಕೋತ್ಸವ ಪ್ರದರ್ಶನ, ರಂಗ ಚಿಂತನೆ ಮತ್ತು ರಂಗ ಕಲಾ ಸನ್ಮಾನ ನಡೆಯಲಿದೆ. ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹಡಪದ ನಾಟಕೋತ್ಸವಕ್ಕೆ ಚಾಲನೆ ನೀಡುವರು. ನಿತ್ಯ ಇಬ್ಬರು ಕಲಾವಿದರಿಗೆ ರಂಗ ಸನ್ಮಾನ ನಡೆಯಲಿದೆ ಎಂದರು.