ಹುಬ್ಬಳ್ಳಿ: ಮಕ್ಕಳ ಶಿಕ್ಷಣಕ್ಕಷ್ಟೇ ಪಾಲಕರು ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕೊಡುವ ಜವಾಬ್ದಾರಿಯೂ ಪಾಲಕರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿವಳಿಕೆ ನೀಡಿದರು.
ರೇಣುಕಾ ಏಜೆನ್ಸಿ ಹಾಗೂ ನ್ಯೂರೇಯ್ಸ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ನಗರದ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಮಾವೇಶ ಹಾಗೂ ನಗೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗೆ ಪಾಲಕರು ಇಡೀ ಜೀವನವನ್ನೇ ಮುಡಿಪಾಗಿಡುತ್ತಾರೆ. ಆದರೆ, ಇಳಿವಯಸ್ಸಿನಲ್ಲಿ ಮಕ್ಕಳು, ಪಾಲಕರನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವುದು ಬೇಸರದ ಸಂಗತಿ. ಪ್ರತಿಯೊಬ್ಬರೂ ತಂದೆ-ತಾಯಿಯನ್ನು ಗೌರವಿಸಬೇಕು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಶಿಕ್ಷಕರು ಮಾನಸಿಕವಾಗಿ ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮವಾಗಿ ಪಾಠ ಮಾಡಲು ಸಾಧ್ಯ. ಯೋಗ, ಧ್ಯಾನದಿಂದ ನೆಮ್ಮದಿ, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಹೀಗಾಗಿ ಶಿಕ್ಷಕರು ಪ್ರತಿದಿನ ಯೋಗಾಸನ ಮಾಡಬೇಕು ಎಂದರು.
ರಾಯಾಪುರದ ಕೆಎಲ್ಇ ಶಾಲೆಯ ಪ್ರಾಚಾರ್ಯೆ ಶುಭಾಂಗಿ ಮೋರೆ ಮಾತನಾಡಿ, ಶಿಕ್ಷಕ ವೃತ್ತಿ ಸವಾಲಿನಿಂದ ಕೂಡಿದೆ. ಆಧುನಿಕತೆಗೆ ತಕ್ಕಂತೆ ಶಿಕ್ಷಕರು ಅಪ್ಡೇಟ್ ಆಗುತ್ತಿರಬೇಕು ಎಂದರು.
ಕಪ್ಪು ಹಲಗೆಯ ಆಚೆ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಪ್ರವೀಣ ಗುಡಿ, ಶಿಕ್ಷಕರ ನಡುವೆ ಸಂಪರ್ಕ, ಸಂವಹನ, ಕಲಿಕಾ ಸುಧಾರಣೆ ಕುರಿತು ವಿವರಿಸಿದರು.
ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಧ್ಯಾನ ತರಬೇತಿ ಮತ್ತು ಸಮಾಲೋಚನೆ ಕುರಿತು ಉಪನ್ಯಾಸ ನೀಡಿದರು.
ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಿತು.
ಚೇತನ ಪಬ್ಲಿಕ್ ಸ್ಕೂಲ್ ಚೇರ್ಮನ್ ಪ್ರೊ. ಮಹೇಶ ದ್ಯಾವಪ್ಪನವರ, ಉದ್ಯಮಿ ರಮೇಶ ಬಾಫಣಾ ಇತರರಿದ್ದರು.