ಹುಬ್ಬಳ್ಳಿ: ayurveda college ಇಲ್ಲಿಯ ಹೆಗ್ಗೇರಿಯ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯದ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಾಗ್ಭಟ ಸಭಾಂಗಣದಲ್ಲಿ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಕೆಎಂಸಿಆರ್‌ಐ ಮಾಜಿ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ ಮಾತನಾಡಿ, ಆಯುರ್ವೇದ ನಮ್ಮ ಮೂಲ ಪರಂಪರೆ. ಇದರ ಚಿಕಿತ್ಸಾ ವಿಧಾನವೇ ಬೇರೆ, ಅಲೋಫಥಿ ಚಿಕಿತ್ಸಾ ವಿಧಾನವೇ ಬೇರೆ. ಆದರೂ ಎರಡೂ ಪದ್ಧತಿಯ ಪಠ್ಯಕ್ರಮದಲ್ಲಿ ಸಾಮ್ಯತೆ ಇದೆ. ಇದರ ಉದ್ದೇಶ ರೋಗ ನಿರ್ಮೂಲನೆಯೇ ಹೊರತು, ಭೇದ-ಭಾವ ಸೃಷ್ಟಿಸುವುದಲ್ಲ ಎಂದು ಸಲಹೆ ನೀಡಿದರು.
ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯುರ್ವೇದವು ಆರೋಗ್ಯ ಸಂರಕ್ಷಣೆ, ರೋಗನಿರೋಧಕತೆ ಹಾಗೂ ಸಮಗ್ರ ಆರೋಗ್ಯದ ದೃಷ್ಟಿಕೋನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ಆಯುರ್ವೇದ ಮತ್ತು ಸಮನ್ವಿತ ವೈದ್ಯಕೀಯ ಪದ್ಧತಿಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಆಯುರ್ವೇದದ ಮಹತ್ವ, ಆರೋಗ್ಯ ರಕ್ಷಣೆಯಲ್ಲಿ ಅದರ ಪಾತ್ರ ಹಾಗೂ ಇತರ ವೈದ್ಯಕೀಯ ಪದ್ಧತಿಗಳೊಂದಿಗೆ ಆಯುರ್ವೇದದ ಸಮನ್ವಯದ ಕುರಿತು ವಿಚಾರ ವಿನಿಮಯ ನಡೆಯಿತು.
ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಅನಂತ ಭೀಮಾಜಿ ಜೋಶಿ ಅವರನ್ನು ಗೌರವಿಸಲಾಯಿತು.
ಪ್ರಾಧ್ಯಾಪಕರಾದ ಡಾ. ಸೇವಂತಿಕಾ ರೊಟ್ಟಿ ಹಾಗೂ ಡಾ. ಸುಲೋಚನಾ ರಾಠೋಡ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಾಲಿನ ಅಗ್ನಿವೇಶ ಪ್ರಶಸ್ತಿಯನ್ನು ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್‌ನ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀವತ್ಸ ಎಂ. ನವಲೂರು ಅವರಿಗೆ ಪ್ರದಾನ ಮಾಡಲಾಯಿತು.
ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ, ಡಾ. ಮಹೇಶ ಸಾಲಿಮಠ, ಇತರರಿದ್ದರು.