ಹುಬ್ಬಳ್ಳಿ: ದುಷ್ಕರ್ಮಿಗಳಿಂದ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯ್ದೆ ಕಟ್ಟುನಿಟ್ಟು ಜಾರಿಗೆ ಆಗ್ರಹಿಸಿ ಹುಬ್ಬಳ್ಳಿ ವಕೀಲರ ಸಂಘದ ನೇತೃತ್ವದಲ್ಲಿ ಇಲ್ಲಿಯ ಹೊಸೂರು ಮಹಿಳಾ ವಿದ್ಯಾಪೀಠ ವೃತ್ತದಲ್ಲಿ ಸಂಚಾರ ತಡೆ ನಡೆಸಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೊಸ ಕೋರ್ಟ್ ಎದುರು 2 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ವಕೀಲರು, ನ್ಯಾಯಾಲಯದಿಂದ ಪಾದಯಾತ್ರೆ ಮೂಲಕ ಮಹಿಳಾ ವಿದ್ಯಾಪೀಠ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಸಂಚಾರ ತಡೆದರು. ನಂತರ ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಹಳ ಹೊತ್ತು ಸಂಚಾರ ತಡೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸ್ ಆಯುಕ್ತರ ಮನವೊಲಿಕೆ ನಂತರ ಪ್ರತಿಭಟನಾಕಾರರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಗೌರಿಬಿದನೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆ ವಕೀಲರ ಮೇಲೆ ತೀವ್ರ ತರಹದ ದಾಳಿಗಳಾಗಿವೆ. ಇದು ವಕೀಲರಲ್ಲಿ ಆಘಾತ ತಂದಿದೆ. ವಕೀಲರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳು ಅತ್ಯಂತ ಖಂಡನೀಯ. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಲ್ಲೆಗೊಳಗಾದ ವಕೀಲರ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ ಮನವಿಯನ್ನು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ರವಾನಿಸಲಾಯಿತು.
ವಕೀಲರ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳಿಗೆ ಯಾರೂ ವಕಾಲತ್ತು ವಹಿಸಬಾರದು ಎಂದು ವಕೀಲರಲ್ಲಿ ಮನವಿ ಮಾಡಿದ್ದಲ್ಲದೆ, ನ್ಯಾಯಾಲಯದ ಕಲಾಪದಿಂದ ದೂರು ಉಳಿದರು.
ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ದಾಸನಾಳ, ಪ್ರಮುಖರಾದ ಬಿ.ಡಿ. ಹೆಗಡೆ, ಉದಯ ಇಟಗಿ, ಲಕ್ಷ್ಮಣ ಬೀಳಗಿ, ಎಂ.ಎಂ. ಹಳ್ಳಿ, ಎಸ್.ವೈ. ದುಂಡರೆಡ್ಡಿ, ಶಿವು ಅರಗಂಜಿ, ಪಿ.ಎಸ್. ನರೇಗಲ್, ಎಸ್.ಎಸ್. ನಾಗನಗೌಡರ, ಗುರು ಹಿರೇಮಠ, ಗುರು ಕೆಲಗೇರಿ, ಕೆ.ಬಿ. ಶಿವಕುಮಾರ, ಸವಿತಾ ಪಾಟೀಲ, ಸಂತೋಷ ರೆಡ್ಡಿ, ಈಶ್ವರ ಜಂತಲಿ, ಶ್ರೀನಿವಾಸ ಹೆಬ್ಬಳ್ಳಿ, ಲೋಕೇಶ ಕೆ.ಎಂ., ಆಶಾ ಕೊಪ್ಪರ, ಶಿಲ್ಪಾಶ್ರೀ ಎಂ.ಸಿ., ಪ್ರಿಯಾ ಕಂಬಾಳಿಮಠ, ಕೆ.ಎಸ್. ಜೋಶಿ, ಉಮಾ ಪ್ರಮೋದ ಸೇರಿದಂತೆ ಬಹಳಷ್ಟು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.