ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ ನಾಯಕತ್ವದ ಎಂ.ಟಿ. ಲಕ್ಕಿ ಲಯನ್ಸ್ ತಂಡವು, ಮಹೇಶ ಟೆಂಗಿನಕಾಯಿ ಫ್ರೆಂಡ್ಸಿಪ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಜೆಎಸ್ಸಿಎಲ್ ಕ್ರಿಕೆಟ್ ಕ್ಲಬ್ ಹಾಗೂ ಮಹೇಶ ಟೆಂಗಿನಕಾಯಿ ಫ್ಯಾನ್ಸ್ ಕ್ಲಬ್ ನೇತೃತ್ವದಲ್ಲಿ ಇಲ್ಲಿಯ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್ನಲ್ಲಿ 45 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ಇತ್ತೀಚೆಗೆ ವಿಶೇಷ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಪಂದ್ಯಾವಳಿಯಲ್ಲಿ ಎಂ.ಟಿ. ಲಕ್ಕಿ ಲಯನ್ಸ್, ಎಂ.ಟಿ. ಲಕ್ಕಿ ಟೈಗರ್ಸ್, ಎಂ.ಟಿ. ಲಕ್ಕಿ ಫೈಟರ್ಸ್ ಹಾಗೂ ಎಂ.ಟಿ. ಲಕ್ಕಿ ಸ್ಟ್ರೈಕರ್ಸ್ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು. ರೋಚಕ ಹಣಾಹಣಿಯ ಬಳಿಕ ನಡೆದ ಅಂತಿಮ ಪಂದ್ಯದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರೇ ನಾಯಕತ್ವ ವಹಿಸಿದ್ದ ಎಂ.ಟಿ. ಲಕ್ಕಿ ಲಯನ್ಸ್ ತಂಡ ವಿಜಯಶಾಲಿಯಾಯಿತು.
ವಿಶೇಷವೆಂದರೆ, ಗೆಲುವಿನ ಟ್ರೋಫಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಶ ತೆಂಗಿನಕಾಯಿ, ಇದು ನನ್ನೊಬ್ಬನ ಗೆಲುವಲ್ಲ, ಜೆಎಸ್ಸಿಎಲ್ ಹಾಗೂ ಫ್ಯಾನ್ಸ್ ಕ್ಲಬ್ನ ಎಲ್ಲರ ಗೆಲುವು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಒಗ್ಗಟ್ಟಿನ ಸಂದೇಶ ಸಾರಿದರು. ಬಳಿಕ ತಮ್ಮ ತಂಡದ ಆಟಗಾರರಾದ ಅಶೋಕ ವಾಲ್ಮೀಕಿ, ಬೀರಪ್ಪ ಖಂಡೇಕರ, ಪ್ರಶಾಂತ ಜಾಧವ, ಸುಬ್ರಮಣ್ಯಂ ಶಿರಕೋಳ, ಶಶಿಶೇಖರ ಡಂಗನವರ, ಶ್ರವಣ ದಂಡಪ್ಪನವರ, ಜಗದೀಶ ಕಾಂಬಳೆ, ದೇವೇಂದ್ರ ಕೋಟಿ ಅವರೊಂದಿಗೆ ಟ್ರೋಫಿ ಸ್ವೀಕರಿಸಿದರು.
ವೈಯಕ್ತಿಕ ವಿಭಾಗದಲ್ಲಿ ಶ್ರೇಷ್ಠ ಆಟಗಾರ ಹಾಗೂ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ದೇವರಾಜ ಕೋಟಿ, ಶ್ರೇಷ್ಠ ಬೌಲರ್ ಪ್ರಶಸ್ತಿಯನ್ನು ಅಲ್ತಾಫ್ಶೇಖ್ ಹಾಗೂ ಹಿರಿಯ ಆಟಗಾರರ ವಿಭಾಗದ ವಿಶೇಷ ಪ್ರಶಸ್ತಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ನೀಡಿ ಗೌರವಿಸಲಾಯಿತು. ಮೋಹನ ಲಾಲ್ ಜೈನ್, ವಸಂತ ಹೊರಟ್ಟಿ, ಲಕ್ಕಿ ಸುರೇಶ, ಕಿರಣ ಗುಲೇಚಾ ಅವರನ್ನು ಸನ್ಮಾನಿಸಲಾಯಿತು.
ಈ ಪಂದ್ಯಾವಳಿಯ ಸಂಪೂರ್ಣ ಪ್ರಾಯೋಜಕತ್ವವನ್ನು ಜೆಎಸ್ಸಿಎಲ್ನ ಲಕ್ಕಿ ಸುರೇಶ ಜೈನ್ ವಹಿಸಿದ್ದರು. ಜೆಎಸ್ಸಿಎಲ್ನ ಕೊಠಾರಿ ಟೈಗರ್ಸ್ ತಂಡದ ನಾಯಕ ಅರವಿಂದ ಕೊಠಾರಿ ಊಟದ ವ್ಯವಸ್ಥೆ ಮಾಡಿದ್ದರು.